ವೀರಾಜಪೇಟೆ, ಫೆ. ೩: ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಹರ‍್ನಳ್ಳಿ ಹೋಬಳಿಯ ಆನಂದನಗರ ನಿವಾಸಿ ಶಫೀಕ್ (೨೩), ವೀರಾಜಪೇಟೆ ನಗರದ ಸುಣ್ಣದ ಬೀದಿ ನಿವಾಸಿ ಟಿ.ಎಂ.ಸಿ. ವಸತಿ ಗೃಹದ ಸೂರ್ಯ (೨೨), ವೀರಾಜಪೇಟೆ ವಿಜಯ ನಗರದ ನಿವಾಸಿ ಕಿರಣ್ (೨೧), ವೀರಾಜಪೇಟೆ ನೆಹರು ನಗರ ನಿವಾಸಿ ಜೊಯಿಸನ್ (೨೧) ಮತ್ತು ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆ ನಿವಾಸಿ ರಂಜನ್ (೨೪) ಹಾಗೂ ಸುಂಕದಕಟ್ಟೆ ನಿವಾಸಿ ದೀಕ್ಷಿತ್ (೨೩) ಬಂಧಿತ ಆರೋಪಿಗಳಾಗಿದ್ದಾರೆ. ಈ ಪೈಕಿ ರಂಜನ್ ಹಾಗೂ ದೀಕ್ಷಿತ್ ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಂದವರಾಗಿದ್ದಾರೆ.

ಘಟನೆಯ ವಿವರ: ವೀರಾಜಪೇಟೆ ನಗರದ ಸುಂಕದ ಕಟ್ಟೆ ಡೆಂಟಲ್ ಕಾಲೇಜಿಗೆ ತೆರಳುವ ಜಂಕ್ಷನ್‌ನಲ್ಲಿ ಕೆಲವು ಯುವಕರು ಪೊಟ್ಟಣಗಳನ್ನು ಅದಲು ಬದಲು ಮಾಡಿಕೊಂಡು, ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ವೀರಾಜಪೇಟೆ ನಗರ ಠಾಣೆಗೆ ತಾ. ೨ರಂದು ಮಧ್ಯಾಹ್ನದ ವೇಳೆ ಮಾಹಿತಿ ಬಂದಿದ್ದು, ಮಾಹಿತಿಯನ್ನು ಆಧರಿಸಿ ವೀರಾಜಪೇಟೆ ನಗರದ ಪೊಲೀಸ್ ಸಿಬ್ಬಂದಿಗಳು

(ಮೊದಲ ಪುಟದಿಂದ) ಸುಂಕದಕಟ್ಟೆ ಬಳಿ ಯುವಕರ ಗುಂಪಿನ ಮೇಲೆ ಧಾಳಿ ನಡೆಸುತ್ತಾರೆ. ಧಾಳಿ ಸಂದರ್ಭ ಕೈಚೀಲವೊಂದರಲ್ಲಿ ಇರಿಸಲಾಗಿದ್ದ ೧ ಕೆ.ಜಿ. ೨೨೫ ಗ್ರಾಂ ಗಾಂಜಾ ಪತ್ತೆಯಾಗಿದೆ.

ಮಾರುಕಟ್ಟೆಯಲ್ಲಿ ಇದರ ಬೆಲೆ ೫೦,೦೦೦ ರೂ. ಗಳು ಎಂದು ಅಂದಾಜಿಸಲಾಗಿದೆ. ಅಕ್ರಮದಲ್ಲಿ ತೊಡಗಿದ್ದ ಆರು ಮಂದಿ ಯುವಕರನ್ನು ಬಂಧಿಸಿದ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಸ್ಟಾರ್ ಸಿಟಿ ಬೈಕ್ (ಕೆಎ-೪೫ಯು-೮೩೪೧) ಮತ್ತು ಟಿ.ವಿ.ಎಸ್ ಸ್ಕೂಟರ್ (ಕೆಎ-೧೨ಯು-೯೪೫೮) ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾವನ್ನು ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶವಿದ್ದುದಾಗಿ ತನಿಖೆಯ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳ ಮೇಲೆ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರ ಆದೇಶದ ಮೇರೆಗೆ ವೀರಾಜಪೇಟೆ

ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಬಿ.ಎಸ್ ಶ್ರೀಧರ್ ನೇತೃತ್ವದಲ್ಲಿ ವೀರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ, ಎ.ಎಸ್.ಐ. ಮೊಹಮ್ಮದ್, ಸಿಬ್ಬಂದಿಗಳಾದ ಮುಸ್ತಫಾ, ರಜನ್ ಕುಮಾರ್, ಪಿ.ಎಂ. ಮುನೀರ್, ಗಿರೀಶ್, ಧರ್ಮ, ಶೆಟ್ಟಪ್ಪ ಬಾಗೆವಾಡಿ, ಸುಬ್ರಮಣಿ, ಸತೀಶ್ ಮತ್ತು ಚಾಲಕ ರಮೇಶ್ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

-ಕಿಶೋರ್‌ಕುಮಾರ್ ಶೆಟ್ಟಿ