ಗೋಣಿಕೊಪ್ಪಲು, ಫೆ.೩: ಕುಟ್ಟಂದಿಯಲ್ಲಿ ನಿನ್ನೆ ನಡೆದ ಹುಲಿ ದಾಳಿ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯ ವೇಳೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಆರ್.ಎಫ್.ಒ.ರಾಜಪ್ಪ ಹಾಗೂ ಸಿಬ್ಬಂದಿಗಳನ್ನು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಿನ್ನೆ ತಡರಾತ್ರಿವರೆಗೂ ದಿಗ್ಬಂಧನಕ್ಕೆ ಒಳಪಡಿಸಿದ್ದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದ್ದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ದೂರವಾಣಿ ಮೂಲಕ ಡಿಎಫ್‌ಒ ಚಕ್ರಪಾಣಿ ಹಾಗೂ ಬೆಂಗಳೂರಿನಲ್ಲಿದ್ದ ಎಸಿಎಫ್ ಉತ್ತಪ್ಪ ಅವರನ್ನು ಸಂಪರ್ಕಿಸಿ ಇಂತಹ ಘಟನೆ ಸಂಭವಿಸಿದ ವೇಳೆ ಅಧಿಕಾರಿಗಳು ಸ್ಥಳಕ್ಕೆ ಬರಲು ಹಿಂದೇಟು ಹಾಕುತ್ತಿರುವುದು ಇಂತಹ ಪ್ರತಿಭಟನೆ ನಡೆಯಲು ಕಾರಣವಾಗಿದೆ. ದ.ಕೊಡಗಿನಲ್ಲಿ ಹುಲಿ ಹಾವಳಿಯ ಬಗ್ಗೆ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ, ಅನಿವಾರ್ಯವಾಗಿ ಇಲ್ಲಿನ ಅಧಿಕಾರಿಗಳನ್ನು ರೈತರು ದಿಗ್ಬಂಧನದಲ್ಲಿ ಇಡದೇ ಬೇರೆ ಮಾರ್ಗವಿಲ್ಲ ಎಂದು ತಿಳಿಸಿದರು.

ದೂರವಾಣಿ ಕರೆಗೆ ಸ್ಪಂದಿಸಿದ ಅಧಿಕಾರಿಗಳು ಈಗಾಗಲೇ ತಡರಾತ್ರಿಯಾಗಿದೆ, ಬೆಳಿಗ್ಗೆ ಅಧಿಕಾರಿ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ, ಹೀಗಾಗಿ ಪ್ರತಿಭಟನೆ ಹಿಂಪಡೆಯುವAತೆ ಮನವಿ ಮಾಡಿದರು. ಕೆಲವು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ್ದಲ್ಲಿ ಪ್ರತಿಭಟನೆ ಹಿಂಪಡೆಯುವ ಬಗ್ಗೆ ಚರ್ಚೆ ಮಾಡುವುದಾಗಿ ಅಧಿಕಾರಿಗಳಿಗೆ ಮನು ಸೋಮಯ್ಯ ಈ ವೇಳೆ ಸ್ಪಷ್ಟ ಪಡಿಸಿದರು.

ಷರತ್ತುಗಳು

ತಕ್ಷಣ ಜಾನುವಾರು ಕಳೆದುಕೊಂಡ ರೈತ ಅಣ್ಣೀರ ಹರಿ ಖಾತೆಗೆ ೨೦ ಸಾವಿರ ಹಣ ಜಮಾ ಮಾಡಬೇಕು. ಗಂಭೀರ ಸ್ಥಿತಿಯಲ್ಲಿರುವ ಹಸುವಿನ ಚಿಕಿತ್ಸೆ ಯನ್ನು ಅರಣ್ಯ ಇಲಾಖೆಯ ವತಿಯಿಂದಲೇ ನಡೆಸಬೇಕು. ಕರುವಿನ ಚಿಕಿತ್ಸೆಗೆ ಖರ್ಚು ಮಾಡಿದ ೫ ಸಾವಿರ ಹಣವನ್ನು ನೀಡಬೇಕು. ನಿಯಮದಂತೆ ಸಿಗುವ ಪರಿಹಾರ ಹಣವನ್ನು ೨೪ ಗಂಟೆಯ ಒಳಗೆ ನೊಂದ ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಹುಲಿ ಹಾವಳಿಯ ಬಗ್ಗೆ ಕಾರ್ಯಾಚರಣೆ ನಡೆಸಿ ಮುಂದೆ ಯಾವುದೇ ಅನಾಹುತ ಸಂಭವಿಸದAತೆ ಎಚ್ಚರಿಕೆ ವಹಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದರು.

ರೈತರು ವಿಧಿಸಿದ ಎಲ್ಲಾ ಷರತ್ತುಗಳನ್ನು ಅಧಿಕಾರಿಗಳು ಒಪ್ಪಿಕೊಂಡ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಅಣ್ಣೀರ ಹರಿ ಖಾತೆಗೆ ರಾತ್ರಿ ೨೦ ಸಾವಿರ ಹಣವನ್ನು ಅಧಿಕಾರಿ ಜಮಾ ಮಾಡಿದರು ನಂತರ ಅಧಿಕಾರಿಗಳಿಗೆ ವಿಧಿಸಿದ್ದ ದಿಗ್ಬಂಧನವನ್ನು ತೆರವುಗೊಳಿಸಲಾಯಿತು.

ಈ ವೇಳೆ ಇಲ್ಲಿನ ರೈತರು, ನಾಗರಿಕರು ಯಾವುದಾದರು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕೂಡಲೇ ಆಗಮಿಸಿ ರಂಪಾಟ ಮಾಡುತ್ತಾರೆ, ಪರಿ ಪರಿಯಾಗಿ ಬೇಡಿಕೊಂಡರು ಕ್ಷಮೆ ನೀಡುವುದಿಲ್ಲ ಎಂದು ಗ್ರಾಮದ ಹಿರಿಯರಾದ ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ ಹಾಗೂ ರೈತ ಸಂಘದ ಸಂಚಾಲಕ ಚೇರಂಡ ಜಗನ್ ತಮ್ಮ ಅಸಮಾಧಾನ ಹೊರಹಾಕಿದರು. ಇನ್ನು ಮುಂದೆ ಇಂತಹ ಪ್ರಸಂಗ ಎದುರಾಗುವುದಿಲ್ಲ ಎಂದು ಆರ್.ಎಫ್.ಒ. ರಾಜಪ್ಪ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. - ಹೆಚ್.ಕೆ.ಜಗದೀಶ್