ಸುಂಟಿಕೊಪ್ಪ, ಫೆ. ೨: ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ರಸ್ತೆ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸಿದರು.
ಶಾಸಕರ ವಿಶೇಷ ಅನುದಾನ ಮತ್ತು ಲೋಕೋಪಯೋಗಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಒಟ್ಟು ೯೭ ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ನಾಕೂರು ಶಿರಂಗಾಲ ಮತ್ತು ಕೊಡಗರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಾಫಿ ಬೆಳೆಗಾರರು ೧೦ ಹೆಚ್ಪಿ ಒಳಗಿನ ನೀರಾವರಿ ಪಂಪ್ ಸೆಟ್ಗಳ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡುವುದು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ನಿಲ್ಲಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸಬೇಕೆಂದು ಹಿರಿಯ ಅಭಿಯಂತರರಿಗೆ ಆದೇಶ ನೀಡುವುದಾಗಿ ಬರವಸೆ ನೀಡಿದರು. ಅಂತೆಯೇ ವಿದ್ಯುತ್ ಶುಲ್ಕ ಮನ್ನಾದ ಬಗ್ಗೆ ಕಾಫಿ ಬೆಳೆಗಾರರು ಒಟ್ಟುಗೂಡಿ ಮುಖ್ಯ ಮಂತ್ರಿಯವರಿಗೆ ಪತ್ರ ಬರೆದು ಬೇಡಿಕೆಯನ್ನು ಸಲ್ಲಿಸುವಂತೆ ಕಾಫಿ ಬೆಳೆಗಾರರಿಗೆ ತಿಳಿಸಿದರು. ಹಾದ್ರೆ ಹೇರೂರು ಗ್ರಾಮದಲ್ಲಿರುವ ನಿವೇಶನಗಳನ್ನು ಫಲಾನುಭವಿಗಳಿಗೆ ಮರು ಹಂಚಿಕೆ ಮಾಡಲು ಕ್ರಮಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಹಾಗೂ ಸದಸ್ಯರು ಕೇಳಿಕೊಂಡ ಮೇರೆಗೆ ಇದಕ್ಕೆ ಉತ್ತರಿಸಿದ ಶಾಸಕರು ಇದರ ಬಗ್ಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭ ಮಾಜಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಎಂ.ಎನ್. ಕೋಮಾರಪ್ಪ, ಯುವ ಮೋರ್ಚಾ ಅಧ್ಯಕ್ಷ ಚಂದ್ರು ಹೇರೂರು, ಬಿ.ಜೆ.ಪಿ. ಮುಖಂಡ ಗೌತಮ್, ಸಿ.ಸಿ. ಚೋಮಣಿ, ಶಂಕರ ನಾರಾಯಣ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ. ರಮೇಶ್, ಉಪಾಧ್ಯಕ್ಷ ಬಿ.ಇ ಸತೀಶ್, ಸದಸ್ಯರಾದ ಕೊಳಂಬೆ ಶುಭಾಸ್, ಮಂದಾಡಿ ಜಗನಾಥ್, ಪ್ರೇಮಾ ಕೃಷ್ಣಪ್ಪ, ಅರುಣಾ ಕುಮಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನವರ್ ಹಾಗೂ ಇಂಜಿನಿಯರ್ ಫಯಸ್ ಆಹ್ಮದ್, ವಿಜಯಕುಮಾರ್, ಬಿ.ಜೆ.ಪಿ. ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.