ಸೋಮವಾರಪೇಟೆ, ಫೆ. ೩: ಕೊರೊನಾದಿಂದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಸರ್ಕಾರದಿಂದ ನೀಡಲಾಗುವ ಪರಿಹಾರ ಧನದ ಚೆಕ್ನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಫಲಾನುಭವಿಗಳಿಗೆ ವಿತರಿಸಿದರು.
ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೧೨ ಬಿಪಿಎಲ್ ಕುಟುಂಬಗಳಿಗೆ ತಲಾ ೧ ಲಕ್ಷದಂತೆ ಪರಿಹಾರ ಧನದ ಚೆಕ್ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ಜೀವ ಇದ್ದರೆ ಜೀವನ ಎಂಬುದನ್ನು ಪ್ರತಿಯೋರ್ವರೂ ಮನಗಾಣಬೇಕು. ಕೊರೊನಾ ವೈರಾಣುವಿನಿಂದ ದೂರವಿರಲು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೋವಿಡ್ನಿಂದ ಮೃತಪಟ್ಟ ೬೧ ವಾರಸುದಾರರಿಗೆ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿದ್ದು, ಈಗಾಗಲೇ ಪ್ರತಿ ಫಲಾನುಭವಿಗಳ ಖಾತೆಗೆ ೫೦ ಸಾವಿರ ಜಮೆ ಮಾಡಲಾಗಿದೆ. ಇದರಲ್ಲಿ ೩೮ ಬಿಪಿಎಲ್ ಕುಟುಂಬಗಳಿದ್ದು, ೨೪ ವಾರಸುದಾರರಿಗೆ ಈಗಾಗಲೇ ತಲಾ ೧ ಲಕ್ಷ ನೀಡಲಾಗಿದೆ. ಉಳಿದ ೧೨ ಮಂದಿಗೆ ಚೆಕ್ ಹಸ್ತಾಂತರಿಸಿದ್ದು, ಸಂಕಷ್ಟದ ಸಮಯದಲ್ಲಿ ಸರ್ಕಾರ ನೊಂದವರ ನೆರವಿಗೆ ಧಾವಿಸಿದೆ ಎಂದರು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು, ಕಂದಾಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.