ಮಡಿಕೇರಿ, ಫೆ. ೩: ಭಾರತೀಯ ಹಿಂದೂ ಆಸ್ತಿ ಹಕ್ಕು ಖಾಯ್ದೆಯ ಪ್ರಕಾರ ಗಂಡು ಮಕ್ಕಳಷ್ಟೇ ಸಮಾನ ಹಕ್ಕನ್ನು ಹೆಣ್ಣು ಮಕ್ಕಳೂ ತಂದೆಯ ಆಸ್ತಿಯಲ್ಲಿ ಹೊಂದಿರುತ್ತಾರೆ. ಅವರ ಹಕ್ಕು ಅವರಿಗೆ ಕಾನೂನು ಬದ್ದವಾಗಿ ದೊರೆಯಬೇಕು. ಆದರೆ ಆಸ್ತಿ ಎಂದರೆ ಕೇವಲ ಗದ್ದೆ ತೋಟಗಳಲ್ಲ, ಮದುವೆ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ಚಿನ್ನಾಭರಣಗಳೂ ಸೇರುತ್ತವೆ ಎಂದು ಹಿರಿಯ ವಕೀಲೆ ಕೆಂಬಡ್ತAಡ ಮೀನಕುಮಾರಿ ಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಸರಣಿಯ ಮೂರನೆಯ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತೀಯ ಸಂವಿಧಾನವು ೧೯೯೪ರಿಂದ ಪೂರ್ವನ್ವಯವಾಗುವಂತೆ ಹೆಣ್ಣು ಮಕ್ಕಳಿಗೂ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಆಸ್ತಿ ಹಕ್ಕನ್ನು ನೀಡಿದೆ. ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಆಸ್ತಿಯಲ್ಲಿ ಪಾಲು ಕೇಳುವ ಸಂದರ್ಭದಲ್ಲಿ, ಮದುವೆಯ ಸಮಯದಲ್ಲಿ ನೀಡಿದ ಆಭರಣಗಳ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ಉಪಾಧ್ಯಕ್ಷೆ ಮೂವೆರ ರೇಖಪ್ರಕಾಶ್ ಅವರು, ಕೊಡವ ಸಂಪ್ರದಾಯದಲ್ಲಿ ಹೆಣ್ಣು ಮಗುವಿಗೆ ವಿಶೇಷ ಗೌರವವಿದೆ. ಆ ಗೌರವವನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಬೇಕು. ಮದುವೆಯಾದ ಹೆಣ್ಣು ಮಕ್ಕಳಿಗೆ ತವರು ಮನೆಯೇ ಆಸ್ತಿ. ಅದನ್ನು ಉಳಿಸಿಕೊಳ್ಳಬೇಕೆಂದರು. ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಮಾತನಾಡಿ, ಜನತೆಯಲ್ಲಿ ಅದರಲ್ಲೂ ಕೊಡವರಲ್ಲಿ ಆಸ್ತಿ ಹಕ್ಕಿನ ವಿಚಾರದಲ್ಲಿ ಸಾಕಷ್ಟು ಗೊಂದಲವಿತ್ತು. ಅದನ್ನು ಪರಿಹರಿಸುವ ಉದ್ದೇಶವೇ ಈ ಕಾರ್ಯಕ್ರಮ. ಕಾನೂನಿನಲ್ಲಿ ಎಲ್ಲರೂ ಸಮಾನರೇ ಆದರೆ ಕೊಡವರಲ್ಲಿ ಪುರಾತನ ಕಾಲದಲ್ಲಿಯೇ ಹೆಣ್ಣು ಮಕ್ಕಳಿಗೆ ವಿಶೇಷ ಹಾಗೂ ಸಮಾನ ಸ್ಥಾನಮಾನಗಳನ್ನು ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಕೀಲ ಬೊವ್ವೇರಿಯಂಡ ಪೂವಣ್ಣ, ಅಲ್ಲಾರಂಡ ವಿಠಲ್ ನಂಜಪ್ಪ, ಮಾಳೇಟಿರ ಸೀತಮ್ಮ ವಿವೇಕ್, ಓಡಿಯಂಡ ಲೋಕೇಶ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ, ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ, ಸಹಕಾರ್ಯದರ್ಶಿ ಚಾಮೆರ ಪ್ರಿಯ ದಿನೇಶ್, ಹಿರಿಯ ಸದಸ್ಯರಾದ ಮಾಳೇಟಿರ ಶ್ರೀನಿವಾಸ್, ಚೆನಿಯಪಂಡ ಮನುಮಂದಣ್ಣ, ಪೋಡಮಾಡ ಭವಾನಿ ನಾಣಯ್ಯ, ಸೇನಾಧಿಕಾರಿ ಹಾಗೂ ಸಂಘಟನೆಯ ಸದಸ್ಯರಾದ ಸು.ಮೆ. ಬಿದ್ದಂಡ ನಾಣಿದೇವಯ್ಯ, ಸದಸ್ಯರಾದ ಪಂದ್ಯAಡ ರೇಣುಕ ಸೋಮಯ್ಯ, ಕಾಣತಂಡ ವಿವೇಕ್ ಅಯ್ಯಪ್ಪ, ಕರವಂಡ ಸೀಮಾಗಣಪತಿ, ಚಂಗೇಟಿರ ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಸಂಘಟನೆಯ ಖಜಾಂಚಿ ಸಣ್ಣುವಂಡ ಕಿಸುದೇವಯ್ಯ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ತೀತಿಮಾಡ ಸೋಮಣ್ಣ ವಂದಿಸಿದರೆ, ಸದಸ್ಯೆ ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರೆ, ಸದಸ್ಯ ಉಡುವೆರ ವಿಠಲ್ ತಿಮ್ಮಯ್ಯ ಅವರು ಫೇಸ್ಬುಕ್ನಲ್ಲಿ ಕಾರ್ಯಕ್ರಮ ಲೈವ್ ನಡೆಸಿಕೊಟ್ಟರು.