ಮಡಿಕೇರಿ, ಫೆ. ೩: ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿರುವ ಕ್ರಮ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಮುಳ್ಳುಸೋಗೆ ಪಂಚಾಯ್ತಿಯನ್ನು ಸೇರಿಸಿಕೊಂಡಿರುವುದು ಅಭಿವೃದ್ಧಿಗೆ ಪೂರಕ ಎಂಬ ಅಭಿಪ್ರಾಯಗಳು ವ್ಯಕ್ತವಾದರೆ, ಮತ್ತೊಂದೆಡೆ ಇದು ಅಭಿವೃದ್ಧಿಗೆ ಮಾರಕ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.
ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ‘ಕುಶಾಲನಗರ ಪುರಸಭೆ ಸುತ್ತಮುತ್ತ’ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದದಲ್ಲಿ ಪಾಲ್ಗೊಂಡವರು ತಮ್ಮ ನಿಲುವು ವ್ಯಕ್ತಪಡಿಸಿದರು. ಪುರಸಭೆ ಯಾರಿಂದಾಯ್ತು.? ಎಂಬ ವಿಚಾರ ರಾಜಕೀಯ ರಂಗು ಕೂಡ ಪಡೆದುಕೊಂಡAತೆ ಸಂವಾದದಲ್ಲಿ ಭಾಸವಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರ ನಡುವಿನ ವಾಗ್ವಾದ ಸಂವಾದದ ಬಿಸಿಯನ್ನು ಹೆಚ್ಚಿಸಿತು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೇಶವ ಜಯವರ್ಧನ್ ಮಾತನಾಡಿ, ಕುಶಾಲನಗರ ಪಟ್ಟಣ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿಸುವುದು ಸಂತೋಷದ ವಿಚಾರವಾಗಿದೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ನಿರಂತರ ಪ್ರಯತ್ನ ಹಾಗೂ ಅನೇಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಪುರಸಭೆ ವಿಚಾರದಲ್ಲಿ ಎದ್ದಿರುವ ಗೊಂದಲಗಳು ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಳ್ಳುಸೋಗೆ ಗ್ರಾ.ಪಂ. ಅಧ್ಯಕ್ಷ ಚೆಲುವರಾಜು ಮಾತನಾಡಿ, ಗ್ರಾಮ ಸುಧಾರಣೆಯಾಗಬೇಕು ಎಂಬ ದೃಷ್ಟಿಯಲ್ಲಿ ಪುರಸಭೆ ಮಾಡಿರುವುದು ಸ್ವಾಗತಾರ್ಹ. ಆದರೆ, ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯ ೨೩ ಸದಸ್ಯರು ತಮ್ಮ ಅಧಿಕಾರಾವಧಿ ಮುಗಿಯುವ ತನಕ ಪುರಸಭೆಯನ್ನಾಗಿ ಮಾಡದಂತೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಇದನ್ನು ಹೊರತುಪಡಿಸಿ ಸದಸ್ಯರುಗಳಿಗೆ ಪುರಸಭೆ ಮಾಡುವುದರಲ್ಲಿ ಯಾವುದೇ ವಿರೋಧಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಶಾಲನಗರ ಜೆಡಿಎಸ್ ನಗರಾಧ್ಯಕ್ಷ ಆನಂದ್ ಕುಮಾರ್ ಮಾತನಾಡಿ, ಪುರಸಭೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅವೈಜ್ಞಾನಿಕ ನೀತಿಯನ್ನು ವಿರೋಧಿಸುತ್ತೇವೆ. ಮುಳ್ಳುಸೋಗೆಯ ಬದಲು ಮಾದಪಟ್ಟಣವನ್ನು ಸೇರಿಸಿಕೊಳ್ಳಬಹುದಿತ್ತು. ಕುಶಾಲನಗರ ಪ.ಪಂ. ೩.೧೦ ಚದರ ಕಿ.ಮೀ ಇದೆ. ಪುರಸಭೆಯಿಂದ ೧೧.೧೨ ಚ. ಕಿ.ಮೀ ಆಗಲಿದೆ. ಈ ಪೈಕಿ ೮ ಚದರ ಕಿ.ಮೀ. ಮುಳ್ಳುಸೋಗೆ ಭಾಗದ್ದಾಗಿದೆ. ಈ ಹಿನ್ನೆಲೆ ಮಾದಪಟ್ಟಣವನ್ನು ಸೇರಿಸಿಕೊಂಡು ಪುರಸಭೆಯನ್ನಾಗಿ ಮಾಡುವಂತೆ ಒತ್ತಾಯಿಸಿದರು.
ಬಿಜೆಪಿ ತಾಲೂಕು ವಕ್ತಾರ ಕೆ.ಜಿ. ಮನು ಮಾತನಾಡಿ, ರಾಜಕೀಯ ಪ್ರೇರಿತವಾಗಿ ಪುರಸಭೆಯನ್ನು ಕೆಲವರು ವಿರೋಧಿಸುತ್ತಿದ್ದಾರೆ. ಒಮ್ಮತ್ತದಿಂದ ಮುಳ್ಳುಸೋಗೆ ಪಂಚಾಯ್ತಿಯನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಈ ನಿಟ್ಟಿನಲ್ಲಿ ಕರಡು ಅಧಿಸೂಚನೆ ಪ್ರಕಟಣೆಯಾಗಿ, ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ. ತಾ. ೪ಕ್ಕೆ ಆಕ್ಷೇಪಣೆಗೆ ಸಲ್ಲಿಸಿದ ಕಾಲಾವಕಾಶ ಕೂಡ ಮುಗಿಯಲಿದೆ. ನಂತರ ಇನ್ನೂ ಅನೇಕ ಪ್ರಕ್ರಿಯೆಗಳು ನಡೆಯಲು ಬಾಕಿ ಇದ್ದು, ಇದಕ್ಕೆ ಸಮಯ ತಗುಲಲಿದೆ ಎಂದರು.
ಜಿ.ಪಂ. ಮಾಜಿ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಎಲ್ಲಾ ಜಾತಿ, ಧರ್ಮ, ಭಾಷಿಕರಿರುವ ಪಟ್ಟಣ ಕುಶಾಲನಗರವಾಗಿದ್ದು, ಇದನ್ನು ಕೇಂದ್ರವಾಗಿರಿಸಿಕೊAಡು ತಾಲೂಕು ಮಾಡಬೇಕೆಂದು ಅವಿರತವಾಗಿ ಶ್ರಮಿಸಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದಾಗಿರಬೇಕು. ಕೂಡುಮಂಗಳೂರು ಹಾಗೂ ಮುಳ್ಳುಸೋಗೆಯನ್ನು ಕೇಂದ್ರವಾಗಿರಿಸಿಕೊAಡು ಪಟ್ಟಣ ಪಂಚಾಯ್ತಿಯಾಗಿ ಮಾಡಬಹುದು. ಕುಶಾಲನಗರವನ್ನು ನಗರಸಭೆಯನ್ನಾಗಿ ಮಾಡುವ ಅವಕಾಶಗಳಿವೆ. ಮುಳ್ಳುಸೋಗೆಯನ್ನು ಸೇರಿಸಿಕೊಂಡು ಕುಶಾಲನಗರವನ್ನು ಪುರಸಭೆಯಾಗಿ ಮಾಡುವುದಕ್ಕೆ ಅಭ್ಯಂತರವಿಲ್ಲ ಎಂದು ಹೇಳಿದರು.ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಯಾವುದೇ ಯೋಜನೆ ರೂಪುಗೊಳ್ಳಬೇಕೆಂದಲ್ಲಿ ದೂರದೃಷ್ಟಿಯ ಚಿಂತನೆ ಇರಬೇಕು. ಪ.ಪಂ.ಗೆ ಪ್ರಸ್ತುತ ೭ ಕೋಟಿ ಅನುದಾನವಿದೆ. ಪುರಸಭೆಯಾದರೆ ರೂ. ೬ ಕೋಟಿ ಅನುದಾನ ಹೆಚ್ಚುವರಿಯಾಗಿ ದೊರೆಯಲಿದೆ. ಆದರೆ, ಗ್ರಾಮಗಳು ಹೆಚ್ಚಾಗುವುದರಿಂದ ಅನುದಾನ ವಿಂಗಡಣೆಯಲ್ಲಿ ಸಮಸ್ಯೆ ತಲೆದೋರಲಿದೆ. ಮುಂದಿನ ಜನಗಣತಿಯ ನಂತರ ಖಂಡಿತವಾಗಿ ಕುಶಾಲನಗರ ನಗರಸಭೆಯಾಗಿ ಮೇಲ್ದರ್ಜೆಗೇರಲಿದೆ ಎಂದರು.
ಜಿ.ಪA. ಮಾಜಿ. ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ೧೦ ವರ್ಷದ ಹಿಂದೆ ಮುಳ್ಳುಸೋಗೆ ಪುರಸಭೆ ವ್ಯಾಪ್ತಿಗೆ ಸೇರಬೇಕು ಎಂದವರೇ ಇದೀಗ ಬೇಡ ಎನ್ನುತ್ತಿದ್ದಾರೆ. ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿ ಮುಳ್ಳುಸೋಗೆಯನ್ನು ಕೈಬಿಟ್ಟು ಅತಂತ್ರ ಮಾಡದಂತೆ ಮನವಿ ಮಾಡಿದರು.
ಕುಶಾಲನಗರ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್ ಮಾತನಾಡಿ, ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿಯೂ ಅನುದಾನದ ಕೊರತೆ ಆಗುವುದಿಲ್ಲ. ಏನಾದರೂ ಕೊರತೆ ಎದುರಾದಲ್ಲಿ ಶಾಸಕರು, ಸಂಸದರ ನಿಧಿಯಿಂದ ಹಣ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲಾಗುತ್ತದೆ ಎಂದು ತಿಳಿಸಿದರು.
ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಮಾತನಾಡಿ, ಕುಶಾಲನಗರವನ್ನು ನಗರಸಭೆಯಾಗಿ ಪರಿವರ್ತಿಸಲು ಎಲ್ಲಾ ಅರ್ಹತೆಗಳಿವೆ. ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಕುಶಾಲನಗರದ ಅಭಿವೃದ್ಧಿಗೆ ರೂ. ೫ ಕೋಟಿ ನೀಡಿರುವುದು ಹೊರತುಪಡಿಸಿ ಬರ‍್ಯಾರು ವಿಶೇಷ ಅನುದಾನ ನೀಡಿಲ್ಲ. ಪುರಸಭೆ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಯಬೇಕಾದರೆ ಕುಶಾಲನಗರ ನಗರಸಭೆಯಾಗಬೇಕು ಎಂದರು. ಅಲ್ಲದೆ, ಕೂಡ್ಲೂರು, ಮುಳ್ಳುಸೋಗೆ ಪ.ಪಂ. ಆಗಿ ಮೇಲ್ದರ್ಜೆಗೇರಬೇಕೆಂಬ ಆಶಯ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯ್ತಿಯ ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರಬಾಬು ಮಾತನಾಡಿ, ಪುರಸಭೆಯಿಂದ ಮುಳ್ಳುಸೋಗೆ ಪಂಚಾಯ್ತಿ ಸದಸ್ಯರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಗೊಂದಲ ಪರಿಹಾರಕ್ಕೆ ಕಾನೂನಿನಲ್ಲಿ ಅವಕಾಶವಿದೆ. ದಿಢೀರ್ ಆಗಿ ಪುರಸಭೆಯಾಗುವುದಿಲ್ಲ. ಅದಕ್ಕೆ ಕೆಲವೊಂದು ಪ್ರಕ್ರಿಯೆಗಳಿವೆ ಇದಕ್ಕೆ ಸಮಯ ಬೇಕಾಗುತ್ತದೆ. ಆದರಿಂದ ಗೊಂದಲಕ್ಕೆ ಒಳಗಾದಂತೆ ಹೇಳಿದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್‌ನ ನಿರ್ದೇಶಕ ವಿಶ್ವ ಕುಂಬೂರು ಪ್ರಾರ್ಥಿಸಿ, ಸುನಿಲ್ ಪೊನ್ನೇಟಿ ಸ್ವಾಗತಿಸಿ, ಎಂ.ಎನ್. ಚಂದ್ರಮೋಹನ್ ನಿರೂಪಿಸಿ, ವಂದಿಸಿದರು.