*ಗೋಣಿಕೊಪ್ಪ, ಫೆ. ೩: ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪೊನ್ನಂಪೇಟೆ ತಾಲೂಕಿನ ಮೂರು ಹೋಬಳಿಗಳ ೨೯ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

ಸರ್ಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಮಾಡಿಕೊಂಡು ಬಂದವರಿಗೆ ಹಕ್ಕುಪತ್ರವನ್ನು ವಿತರಿಸುವ ಕಾರ್ಯ ಮಾಡಲಾಗಿದೆ.

೨೦೧೦ರ ಒಳಗಿನ ವರ್ಷದಲ್ಲಿ ವಾಸ ಮಾಡಿದವರು ಹಕ್ಕು ಪತ್ರ ಪಡೆಯಲು ಫಲಾನುಭವಿಗಳಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ವಾಸಿಸುತ್ತಿದ್ದು, ಹಕ್ಕುಪತ್ರ ಹೊಂದದೇ ಇರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆದುಕೊಳ್ಳಬಹುದಾಗಿದೆ. ಮಾರ್ಚ್ ೩೧ರ ಒಳಗೆ ಅರ್ಜಿ ಸಲ್ಲಿಸಲು ದಿನವನ್ನು ವಿಸ್ತರಿಸಲಾಗಿದ್ದು, ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬೋಪಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಆರ್. ಮಾತನಾಡಿ ಫಲಾನುಭವಿಗಳಾಗಲು ಪುರುಷರು ಅರ್ಜಿ ಸಲ್ಲಿಸಿದರೂ ಸಹ ಅದನ್ನು ಮನೆಯ ಯಜಮಾನಿಯ ಹೆಸರಿನಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹಕ್ಕುಪತ್ರ ಪಡೆದುಕೊಂಡ ಜಾಗಗಳು ಪುರುಷರ ದುಶ್ಚಟಗಳಿಗೆ ದುರುಪಯೋಗ ವಾಗುವ ಸನ್ನಿವೇಶವನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಸರ್ವೆ ಅಧಿಕಾರಿ ಬಾನಂಡ ಅರುಣ, ಶಿರಸ್ತೆದಾರ್ ರಾಧಕೃಷ್ಣ, ಕಂದಾಯ ಪರಿವೀಕ್ಷಕ ಸುಧೀಂದ್ರ, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಹಾಜರಿದ್ದರು.