ಸೋಮವಾರಪೇಟೆ, ಫೆ. ೧: ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಹಾಗೂ ಎನ್‌ಡಿಆರ್‌ಎಫ್ ಯೋಜನೆಯಡಿ ತಾಲೂಕಿನ ದೊಡ್ಡಮಳ್ತೆ, ಹಂಡ್ಲಿ, ನಿಡ್ತ ಹಾಗೂ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. ೮.೭೦ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು. ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲಾಗುವ ರಸ್ತೆ, ಚರಂಡಿ, ಸೇತುವೆ, ಕುಡಿಯುವ ನೀರು ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು. ಕಾಮಗಾರಿ ಕಳಪೆಯಾಗದಂತೆ ಕ್ರಮ ವಹಿಸಬೇಕು. ಪಟ್ಟಿಯಲ್ಲಿರುವ ಎಲ್ಲಾ ಕಾಮಗಾರಿಗಳು ಪೂರ್ಣವಾಗಿ ಆಗಿದೆಯೇ ಎಂಬ ಬಗ್ಗೆ ಸ್ಥಳೀಯರು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೩.೬೮ ಕೋಟಿ, ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ೨ ಕೋಟಿ, ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧.೮೬ ಕೋಟಿ, ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ೧.೪೬ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ರಂಜನ್ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಸ್ಥಳೀಯ ಗ್ರಾ.ಪಂ.ಗಳ ಅಧ್ಯಕ್ಷರುಗಳು, ಸದಸ್ಯರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.