ಗೋಣಿಕೊಪ್ಪಲು, ಫೆ. ೨: ದ.ಕೊಡಗಿನಲ್ಲಿ ತಿಂಗಳ ನಂತರ ಮತ್ತೆ ಹುಲಿ ದಾಳಿ ನಡೆಸಿದ್ದು, ಕುಟ್ಟಂದಿ ಗ್ರಾಮದ ಅಣ್ಣೀರ ಹರಿ ಎಂಬವರಿಗೆ ಸೇರಿದ ಹಸು ಹಾಗೂ ಗೂಳಿಯ ಮೇಲೆ ದಾಳಿ ನಡೆಸಿ ಗೂಳಿಯು ಸಾವನ್ನಪ್ಪಿದೆ. ಹಸುವಿಗೆ ಗಂಭೀರ ಗಾಯವಾಗಿದ್ದು ಜೀವನ್ಮರಣ ಸ್ಥಿತಿಯಲ್ಲಿ ನರಳುತ್ತಿದೆ.

ಸುದ್ದಿ ತಿಳಿದ ರೈತ ಸಂಘದ ಕುಟ್ಟಂದಿ ಸಂಚಾಲಕ ಚೇರಂಡ ಕೆ.ಜಗನ್ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ ಮುಂದಾಳತ್ವದಲ್ಲಿ ಸ್ಥಳೀಯ ರೈತ ಮುಖಂಡರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಅರಣ್ಯ ಇಲಾಖೆಯ ನಿರ್ಲಕ್ಷ ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಜೀವನ್ಮರಣ ಸ್ಥಿತಿಯಲ್ಲಿರುವ ಹಸುವಿಗೆ ಸೂಕ್ತ ಚಿಕಿತ್ಸೆಗೆ ಒತ್ತಾಯಿಸಿದರು.

ಹಾಡಹಗಲೇ ಹುಲಿಯು ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದರೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸ್ಥಳಕ್ಕೆ ಆಗಮಿಸದೇ ಇರುವುದನ್ನು ಖಂಡಿಸಿ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು, ಇಲ್ಲದಿದ್ದರೆ ಗೂಳಿಯ ಕಳೆ ಬರಹವನ್ನು ಅರಣ್ಯ ಇಲಾಖೆಯ ಕಚೇರಿಯ ಮುಂದೆ ಇಟ್ಟು ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ಅರಣ್ಯ ವಲಯದ ಸಿಬ್ಬಂದಿ ದಿವಾಕರ್ ಹುಲಿ ಸೆರೆಗೆ ಬೋನ್ ಅಳವಡಿಸುತ್ತೇವೆ, ಪರಿಹಾರ ವಿತರಿಸಲು ಕ್ರಮವಹಿಸುತ್ತೇವೆ,

ಹಿರಿಯ ಅಧಿಕಾರಿಗಳು ಹೈ ಕೋರ್ಟ್ಗೆ ತೆರಳಿರುವುದರಿಂದ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ರೈತ ಮುಖಂಡರಾದ ಉಮೇಶ್ ಕೇಚಮಯ್ಯ, ಬಾನಂಡ ಸ್ವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು

(ಮೊದಲ ಪುಟದಿಂದ) ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ವಿವಿಧ ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ್, ಚೊಟ್ಟೆಕಾಳಪಂಡ ಮನು, ಆಗಮಿಸಿದರು. ಸ್ಥಳಕ್ಕೆ ಕೂಡಲೇ ಆಗಮಿಸುವಂತೆ ದೂರವಾಣಿ ಮೂಲಕ ಪೊನ್ನಂಪೇಟೆ ಅರಣ್ಯ ವಲಯದ ಆರ್.ಎಫ್.ಒ. ರಾಜಪ್ಪ ಅವರಿಗೆ ಒತ್ತಾಯಿಸಿದರು.

ದೂರವಾಣಿ ಕರೆಗೆ ಓಗೊಟ್ಟು ಸ್ಥಳಕ್ಕೆ ಆಗಮಿಸಿದ ರಾಜಪ್ಪ ಅವರನ್ನು ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆ ನಡೆಸಿದರು. ಕೂಡಲೇ ಜೀವನ್ಮರಣ ಸ್ಥಿತಿಯಲ್ಲಿರುವ ಹಸುವಿಗೆ ಚಿಕಿತ್ಸೆ ನೀಡಬೇಕು, ಮೃತಪಟ್ಟ ಗೂಳಿಗೆ ಗರಿಷ್ಠ ಪರಿಹಾರ ನೀಡುವಂತೆ ಆಗ್ರಹಿಸಿದರು. ಡಿಎಫ್‌ಒ ಚಕ್ರಪಾಣಿ ಅವರು ಸ್ಥಳಕ್ಕೆ ಆಗಮಿಸದೇ ಇಲ್ಲಿಂದ ತೆರಳಲು ಸಾಧ್ಯವಿಲ್ಲ. ಅಲ್ಲಿಯ ತನಕ ಅಧಿಕಾರಿಗಳನ್ನು ಇಲ್ಲಿಂದ ಕದಲಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ರೈತ ಸಂಘದ ಮುಖಂಡರಾದ ಸುಳ್ಳಿಮಾಡ ಕಾವೇರಪ್ಪ, ಅಮ್ಮೆಕಂಡ ಚಂಗಪ್ಪ, ಮಿನ್ನಿಮಾಡ ಸಂಪತ್, ಬಾನಂಡ ಸುರೇಶ್, ತಟ್ಟಂಡ ಜೋಯಪ್ಪ, ಚಂದ್ರು ಗಣಪತಿ, ಮುಡಿಯಂಡ ದರ್ಶನ್, ಅಣ್ಣೀರ ವೀವೇಕ್ ಮುಂತಾದವರು ಉಪಸ್ಥಿತರಿದ್ದರು. - ಹೆಚ್.ಕೆ.ಜಗದೀಶ್