ಕಣಿವೆ, ಫೆ. ೧ : ಕುಶಾಲನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಪಶು ಆಸ್ಪತ್ರೆ ಕಟ್ಟಡ ಪ್ರಯೋಜನಕ್ಕೆ ಬಾರದಂತಾಗಿದೆ. ಅಂದರೆ ಜಾನುವಾರುಗಳೇ ಇಲ್ಲದ ಕುಶಾಲನಗರ ಪಟ್ಟಣದಲ್ಲಿ ಇಂತಹ ಸುಸಜ್ಜಿತ ಆಸ್ಪತ್ರೆ ಕಟ್ಟಡದ ಅಗತ್ಯವಿತ್ತೇ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಕುಶಾಲನಗರ ಪಟ್ಟಣದ ಫಾತಿಮ ಕಾನ್ವೆಂಟ್ ಬಳಿ ಇರುವ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾನಗಳು, ಬೆಕ್ಕುಗಳನ್ನು ನಿವಾಸಿಗಳು ಕರೆ ತರುತ್ತಿದ್ದಾರೆ. ದಿನಕ್ಕೆ ಒಂದೂ ಕೂಡ ಹಸು ಆಗಲೀ ಎಮ್ಮೆಗಳಾಗಲೀ ಬರುವುದಿಲ್ಲ. ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕುಶಾಲನಗರ ತಾಲೂಕಿನ ಗೊಂದಿಬಸವನಹಳ್ಳಿ, ಗುಡ್ಡೆಹೊಸೂರು, ಚಿಕ್ಕತ್ತೂರು, ಅತ್ತೂರು, ಹಾರಂಗಿ ಮೊದಲಾದ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಕೃಷಿಯ ಜೊತೆಗೆ ಮಿಳಿತವಾಗಿರುವ ಹೈನುಗಾರಿಕೆ ಕೃಷಿಕರಿಗೆ ಅತೀ ಅಗತ್ಯವಿದ್ದ ಪಶು ಆಸ್ಪತ್ರೆ ಕುಶಾಲನಗರದಲ್ಲಿ ಬೇಕಿತ್ತೇ..? ಎಂದು ಕೃಷಿಕರು ಪ್ರಶ್ನಿಸುತ್ತಿದ್ದಾರೆ.
ಇರುವ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ
ಈಗ ಇಲ್ಲಿನ ಪಶು ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರ ನೇಮಕಾತಿಯೇ ಆಗಿಲ್ಲ. ಅಂದರೆ ಮಾದಾಪುರದ ಪಶು ವೈದ್ಯರು ವಾರದಲ್ಲಿ ಎರಡು ದಿನ ಇಲ್ಲಿಗೆ ಬಂದು ತೆರಳುತ್ತಿದ್ದಾರೆ. ಇನ್ನೂ ಪಶು ಚಿಕಿತ್ಸಕರೂ ಇಲ್ಲ. ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಕ ಮಾಡದೇ ವೈದ್ಯರೇ ಇಲ್ಲದ ಆಸ್ಪತ್ರೆಗೆ ನೂತನ ಕಟ್ಟಡದ ಅಗತ್ಯವೇ ಇರಲಿಲ್ಲ ಎಂಬುದು ಹೈನುಕೃಷಿಕರ ವಾದ.
ಗ್ರಾಮಾಂತರ ಪ್ರದೇಶಗಳಿಂದ ಕುಶಾಲನಗರದ ಪಶು ಆಸ್ಪತ್ರೆಗೆ ಚಿಕಿತ್ಸೆಗೆಂದು ಜಾನುವಾರುಗಳನ್ನು ಒಯ್ಯಲು ಗೂಡ್ಸ್ ಆಟೋದಲ್ಲಿ ಕನಿಷ್ಟ ಒಂದು ಸಾವಿರ ರೂಗಳ ಬಾಡಿಗೆ ಪಾವತಿಸಬೇಕಿದೆ. ಜಾನುವಾರುಗಳು ಇಲ್ಲದ ಪಟ್ಟಣದೊಳಗೆ ಪಶು ಆಸ್ಪತ್ರೆ ಕಟ್ಟುವಾಗ ಆಡಳಿತಾರೂಢರಿಗೆ ಅರಿವಿರಬೇಕಿತ್ತು. ಹಳ್ಳಿಗಳ ಜನರು ಜಾನುವಾರುಗಳನ್ನು ಸಾಕಿದರೆ, ಪಟ್ಟಣದ ಜನರು ನಾಯಿ, ಬೆಕ್ಕುಗಳನ್ನು ಸಾಕುತ್ತಾರೆ. ಹೀಗಿರುವಾಗ ನಾಯಿ ಬೆಕ್ಕುಗಳಿಗೆ ಇಷ್ಟು ದೊಡ್ಡ ಆಸ್ಪತ್ರೆ ಬೇಕಿತ್ತೇ ಎಂದು ಗ್ರಾಮ ಪಂಚಾಯಿತಿ ಸದಸ್ಯ ಜಿ.ಬಿ.ಜಗದೀಶ್ ಪ್ರಶ್ನಿಸಿದ್ದಾರೆ.
ಹಳ್ಳಿಗಳ ಜನರ ಜೀವನಾಡಿಯಾದ ಜಾನುವಾರುಗಳನ್ನು ಜೋಪಾನವಾಗಿಡಲು ಹಳ್ಳಿಗಳಲ್ಲಿ ಸೂಕ್ತವಾದ ಪಶು ಆಸ್ಪತ್ರೆಗಳನ್ನು ಕಟ್ಟಬೇಕು. ಹಾಗೆಯೇ ಪೂರಕವಾದ ವೈದ್ಯ ಸಿಬ್ಬಂದಿಗಳನ್ನು ಸರ್ಕಾರ ನಿಯೋಜಿಸಬೇಕೆಂದು ಜಗದೀಶ್ ಹೇಳಿದ್ದಾರೆ. - ಕೆ.ಎಸ್. ಮೂರ್ತಿ