ಮಡಿಕೇರಿ, ಫೆ. ೨: ಗಣರಾಜ್ಯೋತ್ಸವದ ಪ್ರಯುಕ್ತ ಮೇಕೇರಿಯ ಸ್ವಾಗತ ಯುವಕ ಸಂಘ - ಬಿ.ಯಂ.ಎಸ್. ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇ-ಶ್ರಮ್ ನೋಂದಣಿ ಕಾರ್ಯಕ್ರಮ ಮೇಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಸರಕಾರದ ಇ-ಶ್ರಮ್ ಯೋಜನೆಯ ಪೂರ್ಣ ಮಾಹಿತಿಯನ್ನು ನೀಡಿದರು. ಅಸಂಘಟಿತ ವಲಯದ ಅಭಿವೃದ್ಧಿಗಾಗಿ ಸರಕಾರವು ಜಾರಿಗೊಳಿಸಿರುವ ಯೋಜನೆಗಳನ್ನು ಸ್ಥಳೀಯ ಸ್ವಾಗತ ಯುವಕ ಸಂಘ ಹಾಗೂ ಬಿ.ಯಂ.ಎಸ್. (ಭಾರತೀಯ ಮಜ್ದೂರ್ ಸಂಘ) ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸಮಾಜದ ಕಟ್ಟಕಡೆಯ ಅರ್ಹ ವ್ಯಕ್ತಿಗೂ ತಲುಪಿಸಲು ನಡೆಸಿರುವ ಪ್ರಯತ್ನ ಶ್ಲಾಘನೀಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಸರಕಾರವು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ದೇಶದ ಬೆನ್ನೆಲುಬಿನಂತಿರುವ ಕಾರ್ಮಿಕರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಾರ್ಮಿಕರಿಲ್ಲದೆ ಈ ದೇಶದ ಪ್ರಗತಿ ಸಾಧ್ಯವಿಲ್ಲ. ದುಡಿಯುವ ಕೈಗಳಿಂದ ಮಾತ್ರ ಈ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾಗತ ಯುವಕ ಸಂಘದ ಅಧ್ಯಕ್ಷ ವಿಜು ಹರೀಶ್, ಸಹ ಕಾರ್ಯದರ್ಶಿ ರಾಜೇಶ್, ಸದಸ್ಯರುಗಳಾದ ಜೀವಿತ್, ಭವನ್, ಅಳಗರಾಜ್, ರವೀಂದ್ರ, ಗಣಪತಿ ಪೆರುಮಾಳ್, ಮೇಕೇರಿ ಗ್ರಾ.ಪಂ. ಸದಸ್ಯೆ ಸುಶೀಲಾ ಮಧು ಹಾಜರಿದ್ದರು. ಸುಮಾರು ೬೦ಕ್ಕೂ ಹೆಚ್ಚು ಅರ್ಹ ಗ್ರಾಮಸ್ಥರು ಇ-ಶ್ರಮ್ ಯೋಜನೆ ನೋಂದಣಿ ಮಾಡಿಕೊಂಡರು.