ಸೋಮವಾರಪೇಟೆ, ಫೆ. ೧: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಲೆಕ್ಕ ಸಹಾಯಕಿ ವಿರುದ್ಧ ದಲಿತ ದೌರ್ಜನ್ಯ ಮೊಕದ್ದಮೆ ದಾಖಲಾಗಿದ್ದರೂ ಈವರೆಗೆ ಬಂಧಿಸಿಲ್ಲ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ, ತಕ್ಷಣ ಆರೋಪಿಯನ್ನು ಬಂಧಿಸಬೇಕೆAದು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಟಿ.ಈ. ಸುರೇಶ್, ಕುಡಿಯುವ ನೀರು ಕೇಳಲು ಹೋದ ದಲಿತಪರ ಸಂಘಟನೆಗಳ ಸದಸ್ಯರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ ಕೊಡ್ಲಿಪೇಟೆ ಗ್ರಾ.ಪಂ. ಲೆಕ್ಕಸಹಾಯಕಿ ವಿರುದ್ಧ ಶನಿವಾರಸಂತೆ ಠಾಣೆಯಲ್ಲಿ ತಾ. ೧೪.೧.೨೦೨೨ರಂದು ಮೊಕದ್ದಮೆ ದಾಖಲಾಗಿದ್ದರೂ ಪೊಲೀಸ್ ಇಲಾಖೆ ಈವರೆಗೆ ಆರೋಪಿಯನ್ನು ಬಂಧಿಸಿಲ್ಲ ಎಂದು ದೂರಿದರು. ಕ್ರಮಕೈಗೊಳ್ಳದಿದ್ದಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಟಿ.ಈ. ಸುರೇಶ್ ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಗೌರವ ಸಂಚಾಲಕ ಬಿ.ಜೆ. ಈರಪ್ಪ, ತಾಲೂಕು ಸಂಚಾಲಕ ಡಿ.ಎನ್. ವಸಂತ, ಕೊಡ್ಲಿಪೇಟೆ ಹೋಬಳಿ ಸಂಚಾಲಕ ಡಿ.ಕೆ. ವೀರಭದ್ರ, ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಅವರುಗಳು ಉಪಸ್ಥಿತರಿದ್ದರು.