ಸೋಮವಾರಪೇಟೆ, ಫೆ. ೨: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವರ್ಕ್ಶಾಪ್ ಏರಿಯಾವನ್ನು ಸ್ಥಳಾಂತರ ಮಾಡಲು ಪ.ಪಂ. ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿರುವ ವರ್ಕ್ಶಾಪ್ ಏರಿಯಾ ಕಟ್ಟಡ ಮಾಲೀಕರ ಸಂಘವು, ಪಂಚಾಯಿತಿ ಕ್ರಮದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪರವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವರ್ಕ್ಶಾಪ್ ಏರಿಯಾವನ್ನು ಪ.ಪಂ.ನ ಕೆಲ ಪಟ್ಟಭದ್ರ ಶಕ್ತಿಗಳು ಸ್ಥಳಾಂತರಿಸಲು ಹೊರಟಿರುವುದು ಖಂಡನೀಯ. ಕಳೆದ ಅನೇಕ ದಶಕಗಳಿಂದ ಸಣ್ಣಪುಟ್ಟ ಉದ್ದಿಮೆ ನಡೆಸಿಕೊಂಡು ಜೀವನ ಸಾಗಿಸುತ್ತಿರುವ ಬಡ ವರ್ಗದ ಮೇಲೆ ಇಂತಹ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ತಾ. ೭ರಂದು ಅಂಬೇಡ್ಕರ್ ಭವನದಲ್ಲಿ ಸಮಾನ ಮನಸ್ಕರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಕಳೆದ ೫ ವರ್ಷದ ಹಿಂದೆಯೂ ವರ್ಕ್ಶಾಪ್ ಏರಿಯಾ ಸ್ಥಳಾಂತರ ಯತ್ನ ನಡೆದಿತ್ತು. ಈ ಜಾಗ ಪಂಚಾಯಿತಿಗೆ ಸೇರಿಲ್ಲ. ಮೂಲ ದಾಖಲೆಗಳ ಪ್ರಕಾರ ಇದು ಪೈಸಾರಿಯಾಗಿದ್ದು, ತಹಶೀಲ್ದಾರ್‌ಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯೆ ಪ್ರವೇಶಿಸಿ, ಬಡಮಂದಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ವರ್ಕ್ಶಾಪ್ ಏರಿಯಾ ಏರುಪ್ರದೇಶದಲ್ಲಿದ್ದು, ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ. ಈಗ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಹೈಟೆಕ್ ಮಾರುಕಟ್ಟೆಯ ಕೆಳಭಾಗದಲ್ಲಿಯೇ ವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದು. ಇದನ್ನು ಬಿಟ್ಟು ಸಣ್ಣಪುಟ್ಟ ಉದ್ದಿಮೆಗಳನ್ನು ನಂಬಿಕೊAಡು ಬದುಕು ಸಾಗಿಸುತ್ತಿರುವ ಬಡ ಮಂದಿಯ ಹೊಟ್ಟೆಯ ಮೇಲೆ ಹೊಡೆಯುವ ಪ್ರಯತ್ನಕ್ಕೆ ಪಂಚಾಯಿತಿ ಕೈಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವರ್ಕ್ಶಾಪ್ ಏರಿಯಾ ಸ್ಥಳಾಂತರಕ್ಕೆ ನಿರ್ಣಯ ಕೈಗೊಂಡಿರುವುದು ಖಂಡನೀಯ. ಬಡವರ ಮೇಲೆ ದಂಡ ಪ್ರಯೋಗ ಸಲ್ಲದು. ಪಂಚಾಯಿತಿಯ ಅವೈಜ್ಞಾನಿಕ ಆಡಳಿತದಿಂದ ಜನತೆ ರೋಸಿಹೋಗಿದ್ದಾರೆ. ಮೀನು-ಮಾಂಸ ಮಾರುಕಟ್ಟೆ ಕಟ್ಟಡದಲ್ಲಿ ಹತ್ತಾರು ಮಳಿಗೆಗಳು ಖಾಲಿ ಉಳಿದಿವೆ. ಬಾಗಿಲುಗಳು ಕಿತ್ತುಬಂದು ಅನೈತಿಕ ಚಟುವಟಿಕೆಯ ತಾಣವಾಗಿದೆ. ಇವುಗಳ ಬಗ್ಗೆ ಗಮನಹರಿಸದ ಪಂಚಾಯಿತಿ ಬಡವರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಾರ್ಜ್, ಡಿ.ಎಸ್. ನಿರ್ವಾಣಪ್ಪ, ನ.ಲ. ವಿಜಯ, ರಂಗಸ್ವಾಮಿ ಉಪಸ್ಥಿತರಿದ್ದರು.