ಕಣಿವೆ, ಫೆ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಿಂದ ಏಲಕ್ಕನೂರು, ಅರೆಯೂರು ಗ್ರಾಮಕ್ಕಾಗಿ ಅಬ್ಬೂರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸೀಗೆಹೊಸೂರಿನಿಂದ ಅರೆಯೂರು - ಅಬ್ಬೂರುಕಟ್ಟೆ ವರೆಗೂ ಸಂಪೂರ್ಣ ಹಾಳಾಗಿದೆ. ಈ ರಸ್ತೆಯಲ್ಲಿ ವಾಹನ ಸವಾರರು ಇರಲೀ ಪಾದಚಾರಿಗಳು ಕೂಡ ಸಂಚರಿಸಲು ಆಗದಷ್ಟು ರಸ್ತೆ ಹಾಳಾಗಿ ಹೋಗಿದೆ. ಕೇವಲ ಕಲ್ಲು ಕೋರೆಗಳನ್ನು ನಡೆಸುವ ಕೆಲವೇ ಕೆಲವು ಬಂಡವಾಳ ಶಾಹಿಗಳಿಗೆ ಸೇರಿದ ಲಾರಿಗಳು ಇಲ್ಲಿ ನಿತ್ಯವೂ ಸಂಚರಿಸುವ ಕಾರಣ ಮೊದಲು ಇದ್ದ ರಸ್ತೆ ಈಗ ಇಲ್ಲವಾಗಿದೆ. ಆದ್ದರಿಂದ ಈ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಕಿತ್ತು ಹೋಗಿರುವ ರಸ್ತೆಯಲ್ಲಿ ನಾವು ನಿತ್ಯವೂ ಸಂಚರಿಸುವುದಾದರೂ ಹೇಗೆ ? ಮನೆ, ಹೊಲ - ಗದ್ದೆಗಳಿಗೆ ತೆರಳುವುದಾದರೂ ಹೇಗೆ ? ಶಾಲೆ ಕಾಲೇಜುಗಳಿಗೆ ಮಕ್ಕಳನ್ನು ವಾಹನಗಳಲ್ಲಿ ಕೂರಿಸಿಕೊಂಡು ತೆರಳುವುದಾದರೂ ಹೇಗೆ ಎಂದು ಅಬ್ಬೂರು ಕಟ್ಟೆ ನಿವಾಸಿ ಪಾಣತ್ತಲೆ ಗಿರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಆದ್ದರಿಂದ ಈ ರಸ್ತೆ ದುರಸ್ತಿಗೆ ಅಪ್ಪಚ್ಚು ರಂಜನ್ ಗಮನ ಹರಿಸುವಂತೆ ಇತ್ತಾಯಿಸಿದ್ದಾರೆ. ಏಲಕ್ಕನೂರು ಗ್ರಾಮದಿಂದ ಹೊಸಳ್ಳಿ, ಸೀಗೆ ಹೊಸೂರು, ಮದಲಾಪುರ ಗ್ರಾಮಗಳಿಗಾಗಿ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿಯೂ ಇದೇ ರೀತಿ ಇದೆ. ಸಂಪೂರ್ಣ ಕಿತ್ತು ನಿಂತಿರುವುದರಿAದ ಕೂಡಲೇ ಆ ರಸ್ತೆಯನ್ನು ಸರಿಪಡಿಸಬೇಕೆಂದು ಅರೆಯೂರು ಗ್ರಾಮಸ್ಥರಾದ ಪಾಪಯ್ಯಗೌಡ, ದಿಲೀಪ್, ರಾಜಣ್ಣ, ಮುತ್ತಣ್ಣ, ಪಂಚಾಯಿತಿ ಸದಸ್ಯ ಅಬ್ಬೂರು ಕಟ್ಟೆ ಸಂಭ್ರಮ್ ಗ್ರಾಮಸ್ಥರಾದ ಆಗ್ರಹಿಸಿದ್ದಾರೆ.