ಮಡಿಕೇರಿ, ಫೆ. ೧: ಮಡಿಕೇರಿಯ ರಾಜಾಸೀಟ್ ಮಾರ್ಗದಿಂದ ಖಾಸಗಿ ಬಸ್ ನಿಲ್ದಾಣದ ಕಡೆ ತೆರಳುವ ರಸ್ತೆಯಲ್ಲಿ ವಾಹನಗಳ ಅತಿವೇಗದ ಸಂಚಾರವನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ನಗರಸಭಾ ಸದಸ್ಯರಾದ ಶ್ವೇತಾ ಪ್ರಶಾಂತ್ ಅವರು ಈ ಬಗ್ಗೆ ಗಮನ ಸೆಳೆದಿದ್ದರು. ಈಗಾಗಲೇ ಹಲವು ಅವಘಡಗಳು ಇಲ್ಲಿ ಸಂಭವಿಸಿದ್ದು, ನಿನ್ನೆ ಕೂಡ ಬೈಕೊಂದು ಡಿಕ್ಕಿಯಾಗಿ ಮಹಿಳೆಯೋರ್ವರು ಗಾಯಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ರಾತ್ರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯರುಗಳಾದ ಶ್ವೇತಾ ಪ್ರಶಾಂತ್, ಮಹೇಶ್ ಜೈನಿ, ಅಪ್ಪಣ್ಣ, ಸತೀಶ್, ಉಮೇಶ್ ಸುಬ್ರಮಣಿ ಅವರುಗಳು ಭೇಟಿ ನೀಡಿ ಪರಿಶೀಲಿಸಿದರು. ಎಎಸ್‌ಐ ನಂದ, ಪದ್ಮನಾಭ ಅವರುಗಳು ಹಾಜರಿದ್ದು, ಸಿಬ್ಬಂದಿಗಳು ಸಹಕರಿಸಿದರು. ಇಂದು ಪೊಲೀಸರು ಈ ಮಾರ್ಗದಲ್ಲಿ ಹಲವು ವಾಹನಗಳನ್ನು ಪರಿಶೀಲಿಸಿ ದಂಡವನ್ನು ವಿಧಿಸಿದ್ದಾರೆ.