ಸೋಮವಾರಪೇಟೆ, ಫೆ.೨: ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಕಸ ವಿಲೇವಾರಿ ಘಟಕಕ್ಕೆ ಹಣ ಬಿಡುಗಡೆಯಾಗಿದ್ದರೂ, ಕೆಲವೆಡೆ ಅರಣ್ಯ ಇಲಾಖೆಯ ಅಸಹಕಾರದಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇಂತಹ ಪ್ರಕರಣಗಳ ಬಗ್ಗೆ ತುರ್ತು ಗಮನ ಹರಿಸಬೇಕೆಂದು ಉಪ ವಲಯ ಅರಣ್ಯಾಧಿಕಾರಿಗೆ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಸೂಚಿಸಿದರು.
ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಆಡಳಿತಾಧಿಕಾರಿ ರಾಜಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ತಾ. ಪಂ. ಸಭಾಂಗಣದಲ್ಲಿ ನಡೆಯಿತು.
ಆಲೂರುಸಿದ್ದಾಪುರ ಘಟಕ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ತಕರಾರು ಇದ್ದು, ಮುಂದಿನ ಒಂದು ವಾರದಲ್ಲಿ ಇಲಾಖೆ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರಕ್ಕೆ ಹಣ ವಾಪಸ್ ಹೋಗುತ್ತದೆ. ಇದರೊಂದಿಗೆ ಯೋಜನೆಯೂ ನೆನೆಗುದಿಗೆ ಬೀಳಲಿದೆ. ಇಂತಹ ಪ್ರಕರಣಗಳ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಜಯಣ್ಣ ತಿಳಿಸಿದರು.
ಕಸ ವಿಲೇವಾರಿ ಘಟಕಕ್ಕೆ ಸಂಬAಧಿಸಿದAತೆ ಚೌಡೇನಹಳ್ಳಿ ಮತ್ತು ಜಂಬೂರು ಗ್ರಾಮದಲ್ಲಿ ಸ್ಥಳದ ಸರ್ವೆ ಮಾಡಿ ಹದ್ದು ಬಸ್ತು ಗುರುತಿಸಬೇಕಾಗಿದೆ ಎಂದು ಸರ್ವೆ ಇಲಾಖಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸೋಮವಾರಪೇಟೆ ಹೋಮಿಯೋಪತಿ ಆಸ್ಪತ್ರೆಯಲ್ಲಿ ಯೋಗ ಮತ್ತು ಪ್ರಕೃತ್ತಿ ಚಿಕಿತ್ಸಾಲಯ ಕಾರ್ಯಾರಂಭ ಮಾಡಿದೆ. ಕುಶಾಲನಗರದಲ್ಲಿ ರೂ. ೨೦ ಲಕ್ಷ ವೆಚ್ಚದ ಪಂಚಕರ್ಮ ಚಿಕಿತ್ಸಾ ಘಟಕದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ತೊರೆನೂರು ಮತ್ತು ಕುಶಾಲನಗರದ ಆಸ್ಪತ್ರೆ ಮತ್ತು ವಸತಿಗೃಹ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಆಯುಷ್ ಇಲಾಖೆಯ ಆಡಳಿತಾಧಿಕಾರಿ ಡಾ. ಸ್ಮಿತಾ ಮಾಹಿತಿ ನೀಡಿದರು.
ತಾಲೂಕಿನ ೨೩ ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ ರೂ. ೩೦ ಸಾವಿರದಂತೆ ಸಾಧಿಲ್ವಾರು ಖರ್ಚಿಗೆ ಅನುದಾನ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಮನವಿ ಮಾಡಿದರು.
ತಾಲೂಕಿನ ೭ ಶಾಲೆಗಳಲ್ಲಿ ಈಗಾಗಲೇ ವಿಶೇಷಚೇತನ ಸ್ನೇಹಿ ಶೌಚಾಲಯ ನಿರ್ಮಾಣಗೊಂಡಿದೆ. ಶಾಲೆಗಳಿಗೆ ವಿಜ್ಞಾನ ಉಪಕರಣಗಳು ಮತ್ತು ಪೀಠೋಪಕರಣಗಳ ಖರೀದಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಅದೇ ರೀತಿ ವಿವಿಧ ಶಾಲೆಗಳ ಮೇಲ್ಛಾವಣಿ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಸೋಮವಾರಪೇಟೆ ಸೆಸ್ಕ್ ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರರು ತಾಲೂಕು ಪಂಚಾಯಿತಿ ಸಭೆಗಳಿಗೆ ನಿರಂತರ ಗೈರು ಹಾಜರಾಗುತ್ತಿದ್ದು, ಅವರಿಗೆ ನೋಟೀಸ್ ನೀಡುವಂತೆ ಸಭೆ ನಿರ್ಣಯಿಸಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಮಾತನಾಡಿ, ತಾಲೂಕಿನ ೪೬ ಅಂಗನವಾಡಿ ಕೇಂದ್ರಗಳ ಕಟ್ಟಡ ದುರಸ್ತಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಹಲವು ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದೆ. ತಾಲೂಕಿನ ಜಂಬೂರು ಬಾಣೆಯ ಕಾರ್ಯಪ್ಪ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಬೇಡಿಕೆ ಇದ್ದು, ಇದನ್ನು ಒದಗಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.