*ಗೋಣಿಕೊಪ್ಪ, ಜ. ೩೧: ೭ ಸ್ಟಾರ್ ಯೂತ್ ವಿಂಗ್ ಆಯೋಜಿಸಿದ್ದ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಚಾಂಪಿಯನ್ ಆಗಿ ಉದ್ಯಮಿ ಮುಕ್ತಾರ್ ಬೇಗ್ ಮಾಲೀಕತ್ವದ ರಾಯಲ್ ಚಾಲೆಂರ್ಸ್ ತಂಡ ಹೊರಹೊಮ್ಮಿದೆ. ರನ್ರ್ಸ್ ಅಪ್ ಆಗಿ ಅರುವತ್ತೋಕ್ಲು ಅನುಗ್ರಹ ಯೂತ್ ಕ್ಲಬ್ನ ಮಾಲೀಕತ್ವದ ರಾಜಸ್ಥಾನ ರಾಯಲ್ಸ್ ತಂಡ ತೃಪ್ತಿಪಟ್ಟುಕೊಂಡಿದೆ.
ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳು ನಡೆದ ಪಂದ್ಯಾಟ ಐ.ಪಿ.ಎಲ್ ಮಾದರಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯಿತು.
ಅಂತಿಮ ಪಂದ್ಯಾಟದಲ್ಲಿ ಟಾಸ್ ಗೆದ್ದ ಆರ್.ಸಿ.ಬಿ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ೪ ಓವರ್ಗಳಲ್ಲಿ ಎದುರಾಳಿ ತಂಡಕ್ಕೆ ೧೮ ರನ್ಗಳನ್ನು ಬಾರಿಸಲಷ್ಟೇ ಅವಕಾಶ ನೀಡಿ ರಾಜಸ್ಥಾನ ರಾಯಲ್ಸ್ ತಂಡದ ಪೂರ್ಣ ವಿಕೆಟನ್ನು ಪಡೆದುಕೊಂಡಿತು.
ನಂತರ ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ ತಂಡ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡ ದಾಖಲಿಸಿದ ೧೮ ರನ್ನನ್ನು ಬೆನ್ನಟ್ಟಿ ಹೋರಾಟ ನಡೆಸಿತು. ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಕುತೂಹಲಕರ ಘಟ್ಟದೊಂದಿಗೆ ಪಂದ್ಯಾಟವನ್ನು ಜಯಿಸಿತು.
ಮುಕ್ಕಾಟಿ ಗಗನ್ ಮಾಲೀಕತ್ವದ ಸನ್ ರೈಸ್ ಹೈದರಬಾದ್ ಮೂರನೇ ಸ್ಥಾನ ಮತ್ತು ನೌಫಲ್ ಮಾಲೀಕತ್ವದ ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನವನ್ನು ಅಲಂಕರಿಸಿತು. ಪಂದ್ಯಾವಳಿಯ ಉತ್ತಮ ತಂಡವಾಗಿ ಸನ್ರೈಸ್ ಹೈದರಬಾದ್ ಪಡೆದುಕೊಂಡಿತು.
ಫೈನಲ್ ಪಂದ್ಯದ ಪುರುಷೋತ್ತಮನಾಗಿ ಆರ್.ಸಿ.ಬಿ ತಂಡದ ಗಫರ್ ತೋತು, ಪಂದ್ಯಾವಳಿ ಪುರುಷೋತ್ತಮನಾಗಿ ಆರ್.ಸಿ.ಬಿ ತಂಡದ ಜಂಶಿರ್ ಮಸಿ, ಉತ್ತಮ ದಾಂಡಿಗ ರಮೇಶ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮ್ಯಾನ್ ರಾಜಸ್ಥಾನ ರಾಯಲ್ಸ್ ತಂಡದ ರಮೇಶ್, ಬೆಸ್ಟ್ ಬೌಲರ್ ರಾಜಸ್ಥಾನ ರಾಯಲ್ಸ್ ತಂಡದ ರಾಶು, ಬೆಸ್ಟ್ ಕೀಪರ್ ಪಂಜಾಬ್ ಕಿಂಗ್ಸ್ ತಂಡದ ಶರ್ಫುದ್ದೀನ್, ಉತ್ತಮ ನಾಯಕ ಚಿದು, ಬೆಸ್ಟ್ ಫೀಲ್ಡರ್ ರಾಜಸ್ಥಾನದ ರಾಯಲ್ಸ್ ತಂಡ ನವೀನ್, ಬೆಸ್ಟ್ ಕ್ಯಾಚ್ ಪಂಜಾಬ್ ಕಿಂಗ್ಸ್ ತಂಡದ ಬಷೀರ್, ಬೆಸ್ಟ್ ಅಪ್ಕಮಿಂಗ್ ಪ್ಲೇಯರ್ ಆರ್.ಸಿ.ಬಿ ತಂಡದ ಹರ್ಷದ್ ಪಡೆದುಕೊಂಡರು. ಮೂರು ದಿನಗಳು ನಡೆದ ಪಂದ್ಯಾಟದಲ್ಲಿ ೮ ತಂಡಗಳು ಭಾಗವಹಿಸಿದ್ದವು.
ಉದ್ಘಾಟನೆ: ಅಂತಿಮ ಪಂದ್ಯಾಟವನ್ನು ಕೆ.ಪಿ.ಸಿ.ಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಚಾಲನೆ ನೀಡಿದರು.
ಬಗರ್ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಗಿರೀಶ್ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್, ಸದಸ್ಯರುಗಳಾದ ಬಿ.ಎನ್ ಪ್ರಕಾಶ್, ಮಂಜುಳ, ಪುಷ್ಪಮನೋಜ್, ಶರತ್ಕಾಂತ್, ಜಿ.ಪಿ.ಎಲ್ ಸಮಿತಿ ಅಧ್ಯಕ್ಷ ಸಿಂಗಿ ಸತೀಶ್, ಸಮಾಜ ಸೇವಕರಾದ ಕಾಡ್ಯಮಾಡ ಕುಸುಮ, ಪೊಲೀಸ್ ಉಪನಿರೀಕ್ಷಕ ಸುಬ್ಬಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಚಲನ ಚಿತ್ರ ನಟ ರತನ್ಚಂಗಪ್ಪ, ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ಹಾಜರಿದ್ದರು. ಮುಕ್ತಾರ್ ಬೇಗ್, ಸಮಾಜ ಸೇವಕ ಸುರೇಶ್ರೈ, ಶರತ್ ಕಾಂತ್, ಮೊಹಮ್ಮದ್ ಚೆರ್ದು, ಪ್ರಗತಿಪರ ಚಿಂತಕ ಟಿ.ಎನ್. ಗೋವಿಂದಪ್ಪ ಇವರುಗಳನ್ನು ೭ ಸ್ಟಾರ್ ಯೂತ್ ವಿಂಗ್ ಸಮಿತಿ ವತಿಯಿಂದ ಸನ್ಮಾನಿಸಿದರು.
ವಿರಾಟ್ ಸಂಸ್ಥೆ ಆಟಗಾರರಿಗೆ ಹಾಗೂ ಕ್ರೀಡಾಪ್ರೇಮಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಜಿ.ಪಿ.ಎಲ್ ಕ್ರಿಕೆಟ್ ಪಂದ್ಯಾಟದ ಆಯೋಜಕರಾದ ಸಮಿತಿಯ ಸ್ಥಾಪಕ ಅಧ್ಯಕ್ಷ ಶರ್ಫುದ್ದೀನ್, ಕಾರ್ಯದರ್ಶಿ ಶಮ್ಮು, ಉಪಾಧ್ಯಕ್ಷ ಅಪ್ಪಿ, ಖಜಾಂಚಿ ಸ್ವಾಮಿ, ಸಹಕಾರ್ಯದರ್ಶಿ ಬಶೀರ್, ನಿರ್ದೇಶಕರುಗಳಾದ ಶಾನೀಫ್, ಫಾಸಿಲ್, ಗಣೇಶ್ ಮಂಜು ಇದ್ದರು.