ಸೋಮವಾರಪೇಟೆ,ಜ.೩೧: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಈವರೆಗೆ ಹಕ್ಕುಪತ್ರ ಪಡೆಯದೇ ಇರುವ ಮಂದಿಗೆ ಇದೀಗ ಸರ್ಕಾರದಿಂದಲೇ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಒಂದು ವೇಳೆ ಜಾಗ ಹಾಗೂ ಹಕ್ಕುಪತ್ರ ಪರಭಾರೆಯಾದರೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಎಚ್ಚರಿಕೆ ನೀಡಿದರು.
ಅಕ್ರಮ ಸಕ್ರಮ ಯೋಜನೆಯಡಿ ೯೪ ಸಿ ಮತ್ತು ೯೪ ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ೧೦೧ ಫಲಾನುಭವಿಗಳಿಗೆ ತಮ್ಮ ಕಚೇರಿ ಆವರಣದಲ್ಲಿ ಹಕ್ಕುಪತ್ರ ವಿತರಿಸಿ ಶಾಸಕರು ಮಾತನಾಡಿದರು.
ಅನೇಕ ದಶಕಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ಜಾಗದ ದಾಖಲೆಗಳ ಕೊರತೆಯಿಂದ ಸರ್ಕಾರದ ಅನೇಕ ಸೌಲಭ್ಯಗಳು ಮರೀಚಿಕೆಯಾಗಿತ್ತು. ಇದನ್ನು ಮನಗಂಡು ಸರ್ಕಾರವೇ ತಮ್ಮ ಜಾಗಕ್ಕೆ ಸೂಕ್ತ ದಾಖಲಾತಿ ನೀಡುತ್ತಿದೆ. ಯಾವುದೇ ಕಾರಣಕ್ಕೂ ಇದನ್ನು ಪರಭಾರೆ ಮಾಡಬಾರದು. ಅಂತಹ ಪ್ರಕರಣಗಳು ಪತ್ತೆಯಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರಂಜನ್ ಹೇಳಿದರು.
ತಮ್ಮ ಜಾಗಕ್ಕೆ ಸೂಕ್ತ ದಾಖಲೆಗಳನ್ನು ಹೊಂದಿಕೊAಡು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಮನೆ ನಿರ್ಮಾಣಕ್ಕೂ ಸರ್ಕಾರದ ವಿವಿಧ ಯೋಜನೆಗಳಿದ್ದು ಇದರ ಪ್ರಯೋಜನ ಪಡೆಯಬೇಕೆಂದು ಸಲಹೆ ನೀಡಿದರು.
ಮಾರ್ಚ್ ೩೧ ಕೊನೆ ದಿನ: ೯೪ ಸಿ ಮತ್ತು ೯೪ಸಿಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಮಾರ್ಚ್ ೩೧ರವರೆಗೆ ಅವಕಾಶವಿದ್ದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಹಕ್ಕುಪತ್ರ ಪಡೆಯದೇ ಇರುವ ಮಂದಿ ಈ ಅವಧಿಯೊಳಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಬೇಕೆಂದು ಶಾಸಕ ರಂಜನ್ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂದಿ ೯೪ಸಿ ಮತ್ತು ಕುಶಾಲನಗರ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಂದಿ ೯೪ಸಿಸಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ಒದಗಿಸಿದರು.
ಕಳೆದ ೨೦೦೭ರಲ್ಲಿ ತಾಲೂಕು ತಹಶೀಲ್ದಾರ್ ಆಗಿದ್ದ ಅಧಿಕಾರಿಯ ಸಹಿಯನ್ನು ನಕಲು ಮಾಡಿ, ಬಡ ಮಂದಿಯಿAದ ಹಣ ಪಡೆದು ನೂರಾರು ನಕಲಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ತಾಕೇರಿ, ಕಿರಗಂದೂರು ಭಾಗದಲ್ಲಿ ಅತೀಹೆಚ್ಚು ಇಂತಹ ನಕಲಿ ಹಕ್ಕುಪತ್ರ ನೀಡಲಾಗಿದೆ. ಇಂತಹ ಹಕ್ಕುಪತ್ರಗಳನ್ನು ಪಡೆದವರು ತಕ್ಷಣ ತಾಲೂಕು ಕಚೇರಿಗೆ ಹಿಂತಿರುಗಿಸಿ, ಅಧಿಕೃತ ಹಕ್ಕುಪತ್ರ ಪಡೆಯಬೇಕೆಂದು ಶಾಸಕರು ತಿಳಿಸಿದರು.
೯೬ ಮಂದಿ ಬಾಕಿ: ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು ೧೧೮ ಕಡತಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ೫೧ ಮಂದಿ ಸರ್ಕಾರ ನಿಗದಿಪಡಿಸಿದ ಹಣವನ್ನು ಪಾವತಿಸಿದ್ದಾರೆ. ೬೭ ಮಂದಿಯ ಕಡತಗಳು ವಿಲೇವಾರಿಗೆ ಬಾಕಿಯಿದ್ದು, ಹಣ ಪಾವತಿಸಿದ ತಕ್ಷಣ ಹಕ್ಕುಪತ್ರ ವಿತರಿಸಲಾಗುವುದು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಹೇಳಿದರು.
ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ೫೯ ಕಡತಗಳು ಸಲ್ಲಿಕೆಯಾಗಿದ್ದು, ೩೩ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ೨೬ ಮಂದಿ ಹಣ ಪಾವತಿಸಲು ಬಾಕಿ ಉಳಿದಿದ್ದಾರೆ. ಸುಂಟಿಕೊಪ್ಪ ಹೋಬಳಿಯಲ್ಲಿ ೨೦ ಕಡತಗಳು ಸಲ್ಲಿಕೆಯಾಗಿದ್ದು, ೧೭ ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ ೩ ಮಂದಿ ಹಣ ಪಾವತಿಸಿದರೆ ಹಕ್ಕುಪತ್ರ ನೀಡಲಾಗುವುದು. ಒಟ್ಟು ೧೯೭ ಕಡತಗಳ ಪೈಕಿ ೧೦೧ ಹಕ್ಕುಪತ್ರ ವಿತರಿಸಿದ್ದು, ೯೬ ಮಂದಿ ಸರ್ಕಾರಿ ಶುಲ್ಕ ಪಾವತಿಸಲು ಬಾಕಿ ಉಳಿದಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.