ಸೋಮವಾರಪೇಟೆ,ಜ.೩೧: ಕಳೆದ ೯ ವರ್ಷಗಳಿಂದಲೂ ಕುಂಟುತ್ತಾ ಸಾಗಿ ಸದ್ಯಕ್ಕೆ ಸ್ಥಗಿತಗೊಂಡಿರುವ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿರುವ ಮೈದಾನ ಮೇಲುಸ್ತುವಾರಿ ಸಮಿತಿ, ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ಸೋಮವಾರಪೇಟೆಗೆ ಟರ್ಫ್ ಮೈದಾನ ದೊರಕಿದ್ದು, ನಂತರದ ದಿನಗಳಲ್ಲಿ ಕೆಲವೊಂದು ಅಡೆತಡೆಗಳ ನಡುವೆ ಕಾಮಗಾರಿ ಪ್ರಾರಂಭಗೊAಡಿತು. ಇದೀಗ ಮೈದಾನದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿರುವುದು ಕ್ರೀಡಾಪ್ರೇಮಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ಕಳೆದ ೨ ವರ್ಷಗಳ ಹಿಂದೆ ಕಾಮಗಾರಿಯನ್ನು ಮರು ಪ್ರಾರಂಭಿಸಿದ ಸಂದರ್ಭ ಹಲವಷ್ಟು ಲೋಪದೋಷಗಳನ್ನು ಸಮಿತಿಯ ಮೂಲಕ ತಡೆಗಟ್ಟಲಾಗಿದೆ. ಕಳೆದ ನಾಲ್ಕೆöÊದು ತಿಂಗಳ ಹಿಂದೆ ಕೊರೊನಾ ನೆಪದಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಿರುವ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.
ಮೈದಾನ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಗುತ್ತಿಗೆದಾರರಿಗೆ ಲೀಗಲ್ ನೋಟೀಸ್ ನೀಡಿದ್ದರೂ ಸ್ಪಂದನೆಯಿಲ್ಲ. ಮೈದಾನದ ಬಗ್ಗೆ ಶಾಸಕರು ಸದನದಲ್ಲೂ ಪ್ರಸ್ತಾಪಿಸಿದ್ದಾರೆ. ಈವರೆಗೆ ಆಗಿರುವ ಕಾಮಗಾರಿಗೆ ಎಷ್ಟು ಹಣ ಪಡೆದಿದ್ದಾರೆ ಎಂಬುದೂ ತಿಳಿದಿಲ್ಲ. ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಅಭಿಮನ್ಯುಕುಮಾರ್ ಆಗ್ರಹಿಸಿದರು.
ಸಮಿತಿ ವತಿಯಿಂದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು, ಕ್ರೀಡಾ ಸಚಿವ ನಾರಾಯಣಗೌಡ ಅವರುಗಳನ್ನು ಭೇಟಿ ಮಾಡಲಾಗುವುದು. ಹಾಕಿ ಕರ್ನಾಟಕದ ಉಪಾಧ್ಯಕ್ಷ ಪುರುಷೋತ್ತಮ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಈ ಹಿಂದೆ ಇದ್ದ ಅಧಿಕಾರಿ ಜಿತೇಂದ್ರ ಶೆಟ್ಟಿ ಅವರನ್ನು ಬದಲಾಯಿಸಿ ನೂತನ ಅಧಿಕಾರಿಯನ್ನು ನಿಯೋಜಿಸಿದ್ದಾರೆ ಎಂದರು.
ಮೈದಾನದ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದು, ಸ್ವತಃ ಜಿಲ್ಲಾಧಿಕಾರಿಗಳೇ ಮೈದಾನವನ್ನು ವೀಕ್ಷಣೆ ಮಾಡಿದ್ದಾರೆ. ಇದರೊಂದಿಗೆ ಸಮಿತಿ ಸದಸ್ಯರು ಕಚೇರಿಗೆ ತೆರಳಿ ವಿವರ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಮುಂದಿನ ೧೫ ದಿನಗಳ ಒಳಗೆ ಟರ್ಫ್ ಕಾಮಗಾರಿ ಪ್ರಾರಂಭವಾಗದಿದ್ದರೆ ಸಮಿತಿಯ ನೇತೃತ್ವದಲ್ಲಿ ಸಚಿವರನ್ನು ನೇರವಾಗಿ ಭೇಟಿ ಮಾಡಿ, ಗುತ್ತಿಗೆದಾರ ಹಾಗೂ ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು. ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು. ಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ಬಿ.ಎಂ. ಸುರೇಶ್, ಎಸ್.ಬಿ. ಯಶವಂತ್, ಕಿಬ್ಬೆಟ್ಟ ಮಧು, ಯತೀಶ್ ಅವರುಗಳು ಉಪಸ್ಥಿತರಿದ್ದರು.