ಕೂಡಿಗೆ, ಜ. ೩೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆಯು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹೆಬ್ಬಾಲೆ ಕೊಡಗರಹಳ್ಳಿ ಶನಿವಾರಸಂತೆ, ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಕೇಂದ್ರವನ್ನು ಆರಂಭಿಸಲು ಜಾಗದ ಸಮಸ್ಯೆಗಳ ಮಾಹಿತಿ ಮತ್ತು ಸರ್ಕಾರದಿಂದ ಈಗಾಗಲೇ ಕಸ ವಿಲೇವಾರಿ ಘಟಕವನ್ನು ಆರಂಭ ಮಾಡಲು ಬಿಡುಗಡೆಯಾದ ಹಣದ ಬಳಕೆ ಮಾಡುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದರು.
ಸರಕಾರದಿಂದ ಈಗಾಗಲೇ ಹಣ ಬಿಡುಗಡೆ ಆಗಿರುವುದರಿಂದ ಕಸ ವಿಲೇವಾರಿ ಘಟಕವನ್ನು ಸಹಾ ಪಂಚಾಯಿತಿಗಳಲ್ಲಿ ಆರಂಭ ಮಾಡುವಂತೆ ಆಯಾ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ವಿವಿಧ ಕಾಮಗಾರಿಗಳ ಮಾಹಿತಿಯನ್ನು ಸಂಬAಧಿಸಿದ ಅಧಿಕಾರಿಗಳಿಂದ ಪಡೆದು ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ಈ ಸಂದರ್ಭ ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಜಿಲ್ಲಾ ಲೆಕ್ಕಾಧಿಕಾರಿ ರಾಜಗೋಪಾಲ್, ತಾಲೂಕು ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಇಂಜಿನಿಯರ್ ವೀರೇಂದ್ರ, ತಾಲೂಕು ಪಂಚಾಯಿತಿ ಸಹಾಯಕ ಅಧಿಕಾರಿ ರವೀಶ್, ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ, ಅಸ್ಮ, ಮೇದಪ್ಪ ಉಮೇಶ್ ಸಂತೋಷ್, ಅನಿಲ್ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.