ಚೆಟ್ಟಳ್ಳಿ, ಜ. ೩೦: ವಿದ್ಯಾರ್ಥಿಗಳು ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಜೆ.ಎಸ್.ಎಸ್. ಉನ್ನತ ಶಿಕ್ಷಣ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ. ಭೀಮರಾಜು ಈರೇಗೌಡ ಕರೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ಬಳಗದ ಉದ್ಘಾಟನೆ ಮತ್ತು ರೂಪುರೇಷೆಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರೂಪುರೇಷೆಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ವಿಶೇಷ ಪ್ರತಿಭೆ ಸುಪ್ತವಾಗಿರುತ್ತದೆ. ಆ ಪ್ರತಿಭೆಯನ್ನು ಹೊರ ಹಾಕಲು ಇಂತಹ ವೇದಿಕೆ ಸಿದ್ಧಪಡಿಸಿರುವುದು ಸಂತೋಷದ ವಿಚಾರ. ಅಬ್ದುಲ್ ಕಲಾಂ ಅವರ ಆಶಯದಂತೆ ಉನ್ನತವಾದ ಕನಸು ಹೊತ್ತು ಅದನ್ನು ನನಸು ಗೊಳಿಸಲು ಎಲ್ಲರೂ ಬದ್ಧರಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆಯ ವೃತ್ತ ನಿರೀಕ್ಷಕ ಶ್ರೀಧರ್. ಬಿ.ಎಸ್. ಸಮಾಜವನ್ನು ವಿಂಗಡಿಸುವ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸಾಮರಸ್ಯವನ್ನು ಬೆಳೆಸುವ ಸಲುವಾಗಿ ರಚಿಸಿರುವ ಭ್ರಾತೃತ್ವ ವೇದಿಕೆ ಉತ್ತಮವಾದದ್ದು. ಎಲ್ಲ ವಿದ್ಯಾರ್ಥಿಗಳು ತಮ್ಮ ಮುಂದಿರುವ ಅವಕಾಶಗಳನ್ನು ಬಳಸಿಕೊಂಡು ಮುಂದಿನ ಭವಿಷ್ಯವನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿದರು. ವೇಣುಗೋಪಾಲ್ ಹೆಚ್.ಎಸ್., ಶಿವಕುಮಾರ ಸ್ವಾಮಿ ಬಿ.ಎಸ್. ಹಾಗೂ ನಾಗರಾಜಮೂರ್ತಿ ಪಿ.ಎನ್. ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.