ಸೋಮವಾರಪೇಟೆ,ಜ.೩೦ : ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ಸಮೀಪವಿರುವ ನೇತಾಜಿ ಉದ್ಯಾನವನ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, ರೂ. ೫ ಲಕ್ಷ ವೆಚ್ಚದಲ್ಲಿ ಉದ್ಯಾನವನಕ್ಕೆ ಹೊಸ ಮೆರುಗು ನೀಡಲಾಗುತ್ತಿದೆ.

ಕಳೆದ ಕೆಲ ವರ್ಷಗಳಿಂದ ಸೂಕ್ತ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದ ಈ ಪಾರ್ಕ್ನ್ನು ಇದೀಗ ೫ ಲಕ್ಷ ವೆಚ್ಚದಲ್ಲಿ ನವೀಕರಿಸಲಾಗುತ್ತಿದ್ದು, ಉದ್ಯಾನವನದ ಸ್ವಚ್ಛತೆ, ಕುಳಿತುಕೊಳ್ಳಲು ಬೆಂಚ್‌ಗಳ ಅಳವಡಿಕೆ, ಹೊರಭಾಗದಲ್ಲಿ ಇರುವ ಮರಗಳ ಸುತ್ತಲೂ ಕಲ್ಲಿನ ಕಟ್ಟಡ, ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ.

ಇನ್ನು ಉದ್ಯಾನವನದ ಒಳಗೆ ಗಿಡಗಳನ್ನು ನೆಡುವುದು, ಸೂಕ್ತ ನೀರಿನ ವ್ಯವಸ್ಥೆ, ಹುಲ್ಲುಹಾಸಿನ ನಿರ್ವಹಣೆ ಕಾಮಗಾರಿಗಳು ನಡೆಯಬೇಕಿದೆ. ಇದರೊಂದಿಗೆ ಶಿಥಿಲಾವಸ್ಥೆಯಲ್ಲಿರುವ ವಸತಿ ಗೃಹ ಹಾಗೂ ಶೌಚಾಲಯಗಳ ನಿರ್ಮಾಣವೂ ಆಗಬೇಕಿದೆ.

ಪಟ್ಟಣ ವ್ಯಾಪ್ತಿಯ ಮಂದಿ ದಿನಂಪ್ರತಿ ಬೆಳಿಗ್ಗೆ ಹಾಗೂ ಸಂಜೆ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದು, ಮಕ್ಕಳೂ ಸಹ ಆಟವಾಡುತ್ತಿದ್ದರು. ಆದರೆ ಕಳೆದ ಕೆಲ ಸಮಯದಿಂದ ನಿರ್ವಹಣೆಯ ಕೊರತೆಯಿಂದಾಗಿ ಉದ್ಯಾನವನ ತನ್ನ ಹಿಂದಿನ ಮೆರುಗನ್ನು ಕಳೆದುಕೊಂಡಿತ್ತು. ಇದೀಗ ಮತ್ತೆ ಹೊಸ ಮೆರುಗು ನೀಡುವ ಕಾರ್ಯ ನಡೆಯುತ್ತಿದೆ.

ಉದ್ಯಾನವನದ ವಸತಿ ಗೃಹ ಹಾಗೂ ಸಾರ್ವಜನಿಕ ಬಳಕೆಗೆ ಶೌಚಾಲಯ ನಿರ್ಮಾಣ, ಪಕ್ಕದಲ್ಲೇ ಹರಿಯುವ ತೋಡು ದುರಸ್ತಿ ಕಾರ್ಯಗಳು ಬಾಕಿಯಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ವಾರ್ಡ್ ಸದಸ್ಯೆ ಶೀಲಾ ಡಿಸೋಜ ತಿಳಿಸಿದ್ದಾರೆ.