ಸಿದ್ದಾಪುರ, ಜ.೩೦: ಜಲಮೂಲ ಇರುವ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡದಂತೆ ಗ್ರಾಮಸ್ಥರು ಮಾಲ್ದಾರೆ ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು.
ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ಚೇರಂಡ ನಂದಾ ಸುಬ್ಬಯ್ಯ, ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಕೊಡಗು ಶ್ರೀರಂಗಪಟ್ಟಣ ಕಂದಾಯ ಗ್ರಾಮದ ಘಟ್ಟದಳ ರಸ್ತೆಯ ಬದಿಯಲ್ಲಿ ಮಾಲ್ದಾರೆ ಹಾಗೂ ಸಿದ್ದಾಪುರ ಗ್ರಾ.ಪಂ ಗೆ ಕಸ ವಿಲೇವಾರಿ ಮಾಡಲು ಜಾಗ ಗುರುತಿಸಲಾಗಿದ್ದು, ಇದೇ ಜಾಗದಲ್ಲಿ ತೋಡು ಹುಟ್ಟಿ ಹರಿಯುತ್ತಿದೆ. ತೋಡಿನ ನೀರು ಕರಡಿಗೋಡು ಮುಖಾಂತರ ಜೀವನದಿ ಕಾವೇರಿ ಸೇರುತ್ತಿದ್ದು, ಕಸ ವಿಲೇವಾರಿ ಮಾಡಿದರೆ ಕಾವೇರಿಗೆ ತ್ಯಾಜ್ಯ ನೀರು ಹರಿಯುವುದರಿಂದ ಮುಂದಿನ ದಿನಗಳಲ್ಲಿ ಕಾವೇರಿಗೆ ಕಂಟಕ ಎದುರಾಗಲಿದೆ ಎಂದರು. ಸಮೀಪದಲ್ಲೇ ಸರಕಾರಿ ಶಾಲೆ ಇದ್ದು, ಎರಡು ಪಟ್ಟಣಗಳ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಲಿದ್ದು, ಉದ್ದೇಶಿತ ಘಟಕವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಕಸ ವಿಲೇವಾರಿ ಮಾಡುವ ಬದಲು ಸಾರ್ವಜನಿಕ ಮೈದಾನ ನಿರ್ಮಿಸಬೇಕು. ಕಸ ವಿಲೇವಾರಿ ಮಾಡಲು ಮುಂದಾದರೇ ಕಾನೂನು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಮಾಲ್ದಾರೆ ಜನಪರ ಸಂಘದ ಅಧ್ಯಕ್ಷ ಆಂಟೋನಿ ಮಾತನಾಡಿ, ಗ್ರಾ.ಪಂ. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಕಸ ವಿಲೇವಾರಿ ಮಾಡುವ ವಾಹನಕ್ಕೆ ಕೂಡಲೇ ಚಾಲಕನನ್ನು ನೇಮಿಸಬೇಕು ಎಂದರು. ಮಾಲ್ದಾರೆ ಸರಕಾರಿ ಶಾಲೆಯ ಮುಂಭಾಗ ಅವೈಜ್ಞಾನಿಕವಾಗಿ ಬೃಂದಾವನ ಮಾಡಿದ್ದು, ಮಕ್ಕಳಿಗೆ ಆಟವಾಡಲು ಮೈದಾನ ಇಲ್ಲವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದರು.
ಗ್ರಾಮಸ್ಥ ಸಿ.ಟಿ ಬಿದ್ದಪ್ಪ ಮಾತನಾಡಿ, ಬೆಳೆಗಾರರು ತಮ್ಮ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿರುವ ಕಾಫಿ ಕಣಕ್ಕೆ ತೆರಿಗೆ ಹೆಚ್ಚಿಸಿದ್ದು ಸರಿಯಲ್ಲ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥ ಬಾವ ಮಾಲ್ದಾರೆ ಮಾತನಾಡಿ , ಕಾಫಿ ತೋಟಗಳಲ್ಲಿ ಮಂಗಗಳÀ ಕಾಟ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಹಣ್ಣಿನತೋಟದ ಹಾಡಿಯ ನಿವಾಸಿ ರಾಜು ಮಾತನಾಡಿ, ಗ್ರಾಮಸಭೆಗೆ ಐ.ಟಿ.ಡಿ.ಪಿ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹುಲಿ ಸೆರೆಗೆ ಒತ್ತಾಯ
ಮಾಲ್ದಾರೆ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾಡಾನೆ ಹಾವಳಿ ತೀವ್ರವಾಗಿದ್ದು, ಇದೀಗ ಹುಲಿ ಪ್ರತ್ಯಕ್ಷವಾಗುತ್ತಿರುವುದು ಭಯದ ವಾತಾವರಣ ಎದುರಾಗಿದೆ ಎಂದು ಗ್ರಾಮಸ್ಥ ಸತೀಶ್ ತಿಳಿಸಿದರು. ಆಗಿಂದಾಗ್ಗೆ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಕೊಲ್ಲುತ್ತಿದ್ದು, ರೈತರು ಹಾಗೂ ಸಾರ್ವಜನಿಕರು ಭಯದಿಂದ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಹುಲಿಯನ್ನು ಶೀಘ್ರದಲ್ಲಿ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು. ಮಾಲ್ದಾರೆ ಭಾಗದಲ್ಲಿ ಅರಣ್ಯ ಇಲಾಖೆಯ ಹಲವು ಸಮಸ್ಯೆಗಳಿದ್ದು, ಸಂಸದ ಪ್ರತಾಪ್ ಸಿಂಹರನ್ನು ಸ್ಥಳಕ್ಕೆ ಕರೆಸಿ ಪರಿಹಾರ ಕಂಡುಕೊಳ್ಳಬೇಕೆAದು ಗ್ರಾಮಸ್ಥ ಬೋಪಣ್ಣ ಸಲಹೆ ನೀಡಿದರು.
ಸಭೆಯಲ್ಲಿ ನೋಡಲ್ ಅಧಿಕಾರಿ ರಾಜೇಶ್, ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪ, ಪಿ.ಡಿ.ಓ ರಾಜೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.