ಶನಿವಾರಸಂತೆ, ಜ. ೨೭: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಪ್ರಗತಿಪರ ಬೆಳೆಗಾರ ಡಿ.ಜಿ. ದಯಾನಂದ್ ಅವರ ತೋಟದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ತೋಟಗಾರಿಕಾ ಇಲಾಖೆ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಕಾಫಿ ಬೆಳೆಗಾರರ ಸಂಘ ಹಾಗೂ ಗ್ರಾಮ ಪಂಚಾಯಿತಿಯ ಸಹಭಾಗಿತ್ವದಲ್ಲಿ ಕಾಳು ಮೆಣಸು ಬೆಳೆ ಕ್ಷೇತ್ರೋತ್ಸವ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವೀರೇಂದ್ರಕುಮಾರ್ ಮಾತನಾಡಿ, ಸುಧಾರಿತ ಕಾಳು ಮೆಣಸಿನ ಬೇಸಾಯ ಕ್ರಮ, ರೋಗ ಕೀಟಗಳ ಹತೋಟಿ ಅನುಸರಿಸಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು.
ಚಿಕ್ಕಮಗಳೂರಿನ ಆರ್.ಕೆ. ಇಂಡಸ್ಟಿçÃಸ್ನ ರವಿಕುಮಾರ್ ಅವರು ತೋಟಗಳಿಗೆ ಕೃಷಿ ಸುಣ್ಣ ಬಳಸುವ ಬಗ್ಗೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ. ಭಗವಾನ್ ಸಮಗ್ರ ಕೃಷಿಯ ಬಗ್ಗೆ ಹಾಗೂ ಹಿರಿಯ ಬೆಳೆಗಾರ ಶಬ್ಬೀರ್ ಹುಸೇನ್ ಬೆಳೆಗಾರರು ದೈನಂದಿನ ಕೃಷಿ ಕೆಲಸಗಳಲ್ಲಿ ಅಳವಡಿಸಿಕೊಳ್ಳುವ ಕ್ರಮಗಳ ಬಗ್ಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೋಮವಾರಪೇಟೆ ತೋಟಗಾರಿಕಾ ಇಲಾಖೆ ಅಧಿಕಾರಿ ಕಾವ್ಯಾ, ಕೊಡ್ಲಿಪೇಟೆ ತೋಟಗಾರಿಕಾ ಇಲಾಖೆ ಪ್ರಬಾರ ಅಧಿಕಾರಿ ಸಾಜಿ ಉಪಸ್ಥಿತರಿದ್ದರು. ಸುತ್ತಮುತ್ತಲ ಗ್ರಾಮಗಳ ೧೦೦ಕ್ಕೂ ಅಧಿಕ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.