ಮಡಿಕೇರಿ, ಜ. ೨೭: ನಗರದ ಗಣಪತಿ ಬೀದಿ ಅಗಲೀಕರಣ ವಿಳಂಬಕ್ಕೆ ನಗರಸಭೆಯ ದುರಾಡಳಿತ ಕಾರಣ ಎಂದು ಆರೋಪಿಸಿರುವ ಎಸ್.ಡಿ.ಪಿ.ಐ. ನಗರಸಭಾ ಸದಸ್ಯರುಗಳು, ಇದನ್ನು ಖಂಡಿಸಿ ತಾ. ೨೯ ರಂದು ಪ್ರತಿಭಟನೆ, ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ನಗರಸಭೆಯ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್, ನಗರದ ಅಭಿವೃದ್ಧಿಯ ಹಿತಚಿಂತನೆ ಮಾಡಬೇಕಾದ ನಗರಸಭೆ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಗಣಪತಿ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಸ್ಥಗಿತಗೊಂಡಿರುವುದರಿAದ ಇತ್ತೀಚಿಗೆ ನಡೆದ ಸಾಮಾನ್ಯ ಸಭೆಗೆ ಗುತ್ತಿಗೆದಾರರನ್ನು ಕರೆಸಲು ಒತ್ತಾಯಿಸಿದ ಹಿನ್ನೆಲೆ ಅವರನ್ನು ಕರೆಸಲಾಗಿತ್ತು. ಆದರೆ, ಆಡಳಿತ ಪಕ್ಷದ ಸದಸ್ಯರು ಇದನ್ನು ವಿರೋಧಿಸಿದ ಹಿನ್ನೆಲೆ ಅವರನ್ನು ವಾಪಸ್ ಕಳುಹಿಸಲಾಯಿತು. ಅಂದು ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದರು. ಇದೀಗ ಯಾವುದೇ ಕ್ರಮಕೈಗೊಳ್ಳದಿರುವುದು ನಗರಸಭೆಯ ವೈಫಲ್ಯವನ್ನು ಪ್ರದರ್ಶಿಸುತ್ತಿದೆ ಎಂದು ದೂರಿದರು.

ಮತ್ತೋರ್ವ ಸದಸ್ಯ ಮನ್ಸೂರ್ ಅಲಿ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ನುಸಳಬಾರದು. ಆದರೆ, ನಗರಸಭೆಯಲ್ಲಿ ರಾಜಕೀಯ ಹೆಚ್ಚಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅದಲ್ಲದೆ, ನಗರೋತ್ಥಾನ ಕಾಮಗಾರಿ ಕಳಪೆಯಿಂದ ಕೂಡಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ನಗರಸಭಾ ಸದಸ್ಯರುಗಳಾದ ಬಷೀರ್, ನೀಮಾ ಹರ್ಷದ್, ಮೇರಿ ವೇಗಸ್, ಎಸ್.ಡಿ.ಪಿ.ಐ, ನಗರ ಪ್ರಧಾನ ಕಾರ್ಯದರ್ಶಿ ಮುಸ್ತಾಫ ಇದ್ದರು.