ಕಣಿವೆ, ಜ. ೨೭: ಒಂದು ಕಾಲದಲ್ಲಿ ದಟ್ಟಾರಣ್ಯದೊಂದಿಗೆ ಕೂಡಿದ್ದ ಪ್ರದೇಶದಲ್ಲಿ ಕಾಡಾನೆಗಳ ಆವಾಸ ಸ್ಥಾನದ ಜೊತೆಗೆ ಅವುಗಳ ಬಾಯಾರಿಕೆ ನೀಗಿಸುತ್ತಿದ್ದ ಕೆರೆಯಾದ ಚಿಕ್ಕತ್ತೂರು ಆನೆಕೆರೆ ಜನಪ್ರತಿನಿಧಿಗಳ ನಿರ್ಲಕ್ಷö್ಯಕ್ಕೆ ತುತ್ತಾಗಿದೆ. ಕೆರೆಗಳು ಎಂದರೆ ಗ್ರಾಮ ಜೀವನದ ರೈತಾಪಿಗಳ ಪಾಲಿಗೆ ಸಂಜೀವಿನಿಯಾಗಿವೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿನ ಈ ಆನೆಕೆರೆ, ಪಂಚಾಯಿತಿ ಆಡಳಿತ ಮಂಡಳಿಯ ಅಕ್ಕರೆ ಹಾಗೂ ಆಸರೆಯ ಮಿಳಿತದೊಂದಿಗೆ ಸಮರ್ಪಕವಾಗಿ ಅಭಿವೃದ್ಧಿಯಾಗಬೇಕಿದೆ.
ಸುಮಾರು ಹನ್ನೊಂದು ಮುಕ್ಕಾಲು ಎಕರೆ ವಿಶಾಲ ವ್ಯಾಪ್ತಿಯಲ್ಲಿರುವ ಕೆರೆಯನ್ನು ಸರ್ವಾಂಗೀಣ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಆಕರ್ಷಣೀಯ ಸ್ಥಳವಾಗಿ ಮಾರ್ಪಡಿಸಿದರೆ ಪಂಚಾಯಿತಿಗೆ ಒಂದಷ್ಟು ಆದಾಯ ಹರಿದು ಬರುತ್ತದೆ. ಹಾಸನ - ಮಡಿಕೇರಿ ರಾಜ್ಯ ಹೆದ್ದಾರಿಯ ಕೂಡಿಗೆಯಿಂದ ೫ ಕಿ.ಮೀ. ಅಂತರದ ಪ್ರಮುಖ ಪ್ರವಾಸಿ ಧಾಮ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಈ ಕೆರೆಗೆ ಹಾರಂಗಿ ಜಲಾಶಯಕ್ಕೆ ಬರುವ ಪ್ರವಾಸಿಗರು ನಿಸ್ಸಂಶಯವಾಗಿ ಭೇಟಿ ನೀಡಿಯೇ ತೆರಳುವಂತೆ ವಿಭಿನ್ನ ಮಾದರಿಯಲ್ಲಿ ಈ ಕೆರೆಯನ್ನು ಅಭಿವೃದ್ಧಿ ಮಾಡಲು ಪಂಚಾಯಿತಿ ಆಡಳಿತ ಮುಂದಾಗಬೇಕಿದೆ.
ಎರಡು ದಶಕಗಳ ಹಿಂದೆ ಈ ಕೆರೆಗೆ ಸೂಕ್ತವಾದ ಕೆರೆ ಏರಿಯೆ ಇರಲಿಲ್ಲ. ಆದಾಗ್ಯೂ ತಗ್ಗು ಪ್ರದೇಶದಲ್ಲಿರುವ ಈ ಕೆರೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಬಂದು ಸೇರುತ್ತಿತ್ತು.
ಕ್ರಮೇಣ ಕೆರೆಯ ಸುತ್ತಮುತ್ತ ಜನವಸತಿ ಪ್ರದೇಶ ತಲೆಎತ್ತಿದ ಬಳಿಕ ಕೂಡಿಗೆಗೆ ಸಂಪರ್ಕ ಕಲ್ಪಿಸಲು ಕಾಲು ದಾರಿಯಂತಿದ್ದ ಈ ಕೆರೆ ಏರಿಯನ್ನು ಹಂತ ಹಂತವಾಗಿ ಅಗಲೀಕರಣ ಗೊಳಿಸಿ ಅಭಿವೃದ್ಧಿಪಡಿಸಲಾಯಿತು. ಅಲ್ಲದೇ ಎರಡೂವರೆ ಮೀಟರ್ ತೂಬನ್ನು ಎತ್ತರಿಸಿ ಅಭಿವೃದ್ಧಿ ಮಾಡಲಾಗಿದೆ. ಸುತ್ತಲಿನ ಅತಿಕ್ರಮಿತರಿಂದ ಈ ಕೆರೆಯನ್ನು ತೆರವುಗೊಳಿಸಿ ಕೆರೆಗೆ ಮೀನುಮರಿ ತಂದು ಬಿಡಲಾಗುತ್ತಿದೆ. ಮೀನುಗಾರಿಕೆ ಕೃಷಿ ಮಾಡುವ ವ್ಯಕ್ತಿಗಳಿಗೆ ಟೆಂಡರ್ ನೀಡಲಾಗುತ್ತಿದೆ. ಇದರಿಂದಾಗಿ ಪಂಚಾಯಿತಿಗೆ ವಾರ್ಷಿಕ ಒಂದು ಲಕ್ಷ ಆದಾಯ ಬರುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ "ಶಕ್ತಿ"ಗೆ ತಿಳಿಸಿದರು.
ಕೆರೆಯ ಸುತ್ತ ಆಕರ್ಷಕವಾದ ತಂತಿ ಬೇಲಿ ನಿರ್ಮಿಸಿ ಬೋಟಿಂಗ್ ಗಳನ್ನು ಅಳವಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಮಾದರಿಯಲ್ಲಿ ಸುಂದರವಾದ ಪ್ರವಾಸಿ ಕೆರೆಯಾಗಿ ಮಾಡಬೇಕೆಂಬ ಹಂಬಲ ಇರುವುದಾಗಿ ಈ ಭಾಗದ ಸದಸ್ಯರಾದ ಪಾರ್ವತಮ್ಮ ರಾಮೇಗೌಡ ಹೇಳಿದರು.
ಕೂಡಿಗೆ, ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ, ಬಸವನತ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿನ ತೋಡುಗಳು ಹಾಗೂ ಹಳ್ಳಕೊಳ್ಳಗಳಲ್ಲಿ ಹರಿದುಬರುವ ಮಳೆಯ ನೀರು ತಗ್ಗು ಪ್ರದೇಶದ ಈ ಕೆರೆಗೆ ಹರಿದು ಬರುವ ಕಾರಣ ಈ ಕೆರೆಯಲ್ಲಿ ನೀರು ಈ ಬಾರಿ ಸಮೃದ್ಧವಾಗಿದ್ದು ನಳ ನಳಿಸುತ್ತಿದೆ.
ಅಂತರ್ಜಲ ವೃದ್ಧಿ
ಈ ಆನೆಕೆರೆಯಲ್ಲಿ ನೀರು ತುಂಬಿ ಉಕ್ಕಿ ಹರಿದ ವರ್ಷಗಳಲ್ಲಿ ಸುತ್ತಲಿನ ಗ್ರಾಮಗಳ ರೈತಾಪಿಗಳು ತಮ್ಮ ಹೊಲ, ಗದ್ದೆ - ತೋಟಗಳಿಗೆ ಅಳವಡಿಸಿಕೊಂಡಿರುವ ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧಿಯಾಗಿ ಉಕ್ಕುತ್ತದೆ. ಹಾಗೆಯೇ ಅಂತರ್ಜಲ ವೃದ್ಧಿಗೂ ಈ ಕೆರೆ ನೆರವಾಗಿದೆ.
ಗ್ರಾಮ ನಿವಾಸಿಗಳ ಜಾನುವಾರುಗಳು, ಇತರೆ ಪ್ರಾಣಿ ಪಕ್ಷಿಗಳ ದಣಿವಾರಿಸಲು ಈ ಕೆರೆಯ ನೀರು ಪೂರಕವಾಗಿದೆ.
ಅಷ್ಟೇ ಅಲ್ಲ ಬೆಳಿಗ್ಗೆ ಹಾಗೂ ಸಂಜೆ ವೇಳೆಯ ವಾಯುವಿಹಾರಿಗಳ ಪಾಲಿಗೆ ಈ ಕೆರೆಯ ವಾತಾವರಣ ಪರಿ ಶುದ್ಧವಾದ ಆಕ್ಸಿಜನ್ ಪೂರೈಸುವ ಆರೋಗ್ಯದ ನಿಧಿಯಾಗಿರುವ ಜೊತೆಗೆ ಕಣ್ಣುಗಳಿಗೆ ಇಂಪು ಹಾಗೂ ಮನಕ್ಕೆ ತಂಪು ನೀಡುತ್ತದೆ.
ಕೂಡಿಗೆಯ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮೂಲಕ ಮುಂದೆ ಅರ್ಧ ಕಿ.ಮೀ. ಕ್ರಮಿಸಿದರೆ ನಿಸರ್ಗದತ್ತವಾದ ಈ ಹಚ್ಚಹಸಿರ ಸುಂದರ ಪರಿಸರದಲ್ಲಿ ಆನೆಕೆರೆ ಕಂಡುಬರುತ್ತದೆ.
- ಕೆ.ಎಸ್. ಮೂರ್ತಿ