ಇಹಲೋಕ ತ್ಯಜಿಸಿದ ಮರಕಡ ಸ್ವಾಮೀಜಿ
ಮಂಗಳೂರು, ಜ. ೨೭: ಮಂಗಳೂರು ಸನಿಹದ ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರು ಬುಧವಾರ ರಾತ್ರಿ ೧೦.೪೦ಕ್ಕೆ ಇಹಲೋಕ ತ್ಯಜಿಸಿದರು. ಗುರುವಾರ ಸಂಜೆ ಮಡ್ಯಾರು ಕ್ಷೇತ್ರದಲ್ಲಿ ಅವರ ಸಮಾಧಿ ಕ್ರಿಯೆ ನಡೆಯಿತು.
ರಾಜ್ಯದಲ್ಲಿ ಕೊರೊನಾಗೆ ೪೯ ಬಲಿ
ಬೆಂಗಳೂರು, ಜ. ೨೭: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ ೨೪ ಗಂಟೆಯಲ್ಲಿ ಬರೋಬ್ಬರಿ ೩೮,೦೮೩ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರು ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸಹ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೩೦ ಸಾವಿರ ದಾಟುವ ಮೂಲಕ ಪಾಸಿಟಿವ್ ಪ್ರಮಾಣ ಶೇ. ೨೦.೪೪ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ೧೨ ಮಂದಿ ಸೇರಿದಂತೆ ರಾಜ್ಯದಲ್ಲಿ ಕೊರೊನಾದಿಂದ ೪೯ ಮಂದಿ ಮೃತಪಟ್ಟಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ೧೭,೭೧೭ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಹೊಸ ಪ್ರಕರಣಗಳಿಗಿಂತ ಹೆಚ್ಚಾಗಿದ್ದು, ೬೭,೨೩೬ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ೩,೨೮,೭೧೧ ಸಕ್ರಿಯ ಪ್ರಕರಣಗಳಿವೆ. ಒಟ್ಟು ೧,೮೬,೩೧೩ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.
೪೦೦ ಪಶು ವೈದ್ಯರ ನೇಮಕ, ೧೬೬ ಕೈದಿಗಳ ಬಿಡುಗಡೆಗೆ ಸಂಪುಟ ಅಸ್ತು
ಬೆಂಗಳೂರು, ಜ. ೨೭: ಪಶು ಇಲಾಖೆಯಲ್ಲಿ ೪೦೦ ಪಶು ವೈದ್ಯರನ್ನು ಇಲಾಖೆ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಮತ್ತು ಸನ್ನಡತೆ ಆಧಾರದ ಮೇಲೆ ೧೬೬ ಕೈದಿಗಳ ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಪಶು ಇಲಾಖೆಯಲ್ಲಿ ಸುಮಾರು ೮೦೦ ಹುದ್ದೆಗಳು ಖಾಲಿ ಇದ್ದು, ೪೦೦ ಪಶು ವೈದ್ಯರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು. ೨೦೨೧-೨೨ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಪ್ರೋತ್ಸಾಹದಾಯಕ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ ೧ ರಿಂದ ೧೦ನೇ ತರಗತಿಗಳ ವಿದ್ಯಾರ್ಥಿಗಳಿಗೆ ೯೩.೨೭ ಕೋಟಿಗಳ ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ಸಮವಸ್ತ್ರ ವಿತರಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ ಎಂದರು. ರಾಜ್ಯದ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ೧೪ ಇಂಜಿನಿಯರಿAಗ್ ಕಾಲೇಜುಗಳು ಮತ್ತು ೮೭ ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ೬೦೦೦ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲು ರೂ. ೯೭.೫೦ ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದರು. ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ೧೬೬ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು. ರಾಜ್ಯದಲ್ಲಿ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕು ದಾಖಲೆಗಳನ್ನು ಹಾಗೂ ಕೃಷಿ ಭೂಮಿಯ ಹಕ್ಕು ದಾಖಲೆಗಳನ್ನು ಮತ್ತು ಪಟ್ಟಣ/ನಗರ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸುವುದಕ್ಕಾಗಿ ಕೆಟಿಪಿಪಿ ಕಾಯ್ದೆ ಅನುಸರಿಸಿ ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋನ್ ಒಂದು ಸೇವೆ ಅಥವಾ ವೈಮಾನಿಕ ಸಮೀಕ್ಷೆ ನಡೆಸಲು ರೂ. ೨೮೭ ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ ೫ ಡ್ರೋನ್ಗಳನ್ನು ನೀಡಿತ್ತು. ಹೆಚ್ಚುವರಿ ಡ್ರೋನ್ಗಳನ್ನು ಖರೀದಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಅಧಿಕೃತವಾಗಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ
ನವದೆಹಲಿ, ಜ. ೨೭: ಕೇಂದ್ರ ಸರ್ಕಾರ ಗುರುವಾರ ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಿದೆ. ೬೯ ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್ ಇಂಡಿಯಾ ಬಂದಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಅಧಿಕೃತ ಹಸ್ತಾಂತರಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು, ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಏರ್ ಇಂಡಿಯಾವನ್ನು ತನ್ನ ಮಡಿಲಿಗೆ ಮರಳಿ ಪಡೆದಿರುವುದಕ್ಕೆ ಟಾಟಾ ಸಮೂಹ ತುಂಬಾ ಸಂತೋಷಗೊAಡಿದೆ. ವಿಶ್ವದರ್ಜೆ ಮಟ್ಟದಲ್ಲಿ ವಿಮಾನಯಾನ ಸಂಸ್ಥೆಯನ್ನು ರಚಿಸಲು, ಉತ್ಸಾಹದಿಂದ ಎಲ್ಲರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು. ನಿರ್ವಹಣಾ ನಿಯಂತ್ರಣದೊAದಿಗೆ ಏರ್ ಇಂಡಿಯಾದ ಶೇ. ೧೦೦ ರಷ್ಟು ಷೇರುಗಳನ್ನು ಟಾಟಾ ಗ್ರೂಪ್ನ ಟ್ಯಾಲೇಸ್ ಪ್ರೆöÊವೇಟ್ ಲಿಮಿಟೆಡ್ಗೆ ವರ್ಗಾಯಿಸುವುದರೊಂದಿಗೆ ಏರ್ ಇಂಡಿಯಾದ ಕಾರ್ಯತಂತ್ರದ ಹೂಡಿಕೆ ವಹಿವಾಟು ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸ್ಟಾçಟೆಜಿಕ್ ಪಾಲುದಾರರ ನೇತೃತ್ವದ ಹೊಸ ಮಂಡಳಿಯು ಏರ್ ಇಂಡಿಯಾದ ಜವಾಬ್ದಾರಿಯನ್ನು ವಹಿಸುತ್ತದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರು ತಿಳಿಸಿದ್ದಾರೆ. ಸಂಪೂರ್ಣ ೨,೭೦೦ ಕೋಟಿ ರೂಪಾಯಿ ಸರ್ಕಾರಕ್ಕೆ ಬಂದಿರುವುದರಿAದ ಟಾಟಾ ಗ್ರೂಪ್ನ ಟ್ಯಾಲೇಸ್ ಹೊಸ ಮಾಲೀಕರಾಗಿದ್ದಾರೆ. ನಾವು ಷೇರುಗಳನ್ನು ವರ್ಗಾಯಿಸಿದ್ದೇವೆ. ರೂ. ೧೫,೩೦೦ ಕೋಟಿ ಸಾಲವನ್ನು ಸಹ ಸ್ವೀಕರಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಡಿಐಪಿಎಎಂ ಕಾರ್ಯದರ್ಶಿ ಹೇಳಿದ್ದಾರೆ. ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ನಂತರ, ಸರ್ಕಾರವು ಕಳೆದ ವರ್ಷ ಅಕ್ಟೋಬರ್ ೮ ರಂದು ಏರ್ ಇಂಡಿಯಾವನ್ನು ೧೮,೦೦೦ ಕೋಟಿ ರೂ.ಗೆ ಟ್ಯಾಲೇಸ್ ಪ್ರೆöÊವೇಟ್ ಲಿಮಿಟೆಡ್ಗೆ ಮಾರಾಟ ಮಾಡಿತ್ತು.
ಫೆಬ್ರವರಿ ೧೪ ರಿಂದ ಜಂಟಿ ಅಧಿವೇಶನ
ಬೆಂಗಳೂರು, ಜ. ೨೭: ಫೆಬ್ರವರಿ ೧೪ ರಿಂದ ಫೆಬ್ರವರಿ ೨೫ ರವರೆಗೆ ಜಂಟಿ ಅಧಿವೇಶನ ಕರೆಯಲು ತೀರ್ಮಾನ ಮಾಡಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ. ಇಂದು ತಮ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಫೆಬ್ರವರಿ ೧೪ ರಿಂದ ಜಂಟಿ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ೨೦೨೨-೨೩ನೇ ಸಾಲಿನ ಬಜೆಟ್ ಮಂಡಿಸಲಾಗುವುದು ಎಂದರು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋವಿಡ್ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಯಮ ಸಡಿಲಿಕೆ ಬಗ್ಗೆ ಬೇರೆ ಬೇರೆ ವಲಯದವರ ಮನವಿ, ಶಾಲಾ-ಕಾಲೇಜುಗಳ ವಿಚಾರದ ಬಗ್ಗೆ ಸಹ ಚರ್ಚೆ ಮಾಡಿದ್ದೇವೆ. ಎಲ್ಲ ಸಚಿವರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ತಜ್ಞರ ಸಮಿತಿಯಿಂದ ವರದಿ ಕೇಳಿದ್ದೇವೆ. ನಿಯಮಗಳ ಸಡಿಲಿಕೆ ಬಗ್ಗೆ ತಜ್ಞರ ವರದಿ ಬಂದ ಬಳಿಕ ಸಭೆ ನಡೆಸಿ ಕೂಲಂಕುಶವಾಗಿ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದರು.
೯ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜ. ೨೭: ರಾಜ್ಯ ಸರ್ಕಾರ ಸಿಐಡಿ ಎಸ್ಪಿ ರವಿ ಡಿ. ಚನ್ನಣ್ಣನವರ್ ಸೇರಿದಂತೆ ೯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಸಿಐಡಿ ಎಸ್ಪಿಯಾಗಿದ್ದ ರವಿ ಚನ್ನಣ್ಣನವರ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದ್ದು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಇನ್ನೂ ಸಿಐಡಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಲಯದ ಡಿಸಿಪಿಯಾಗಿ, ಎಸಿಬಿ ಎಸ್ಪಿ ಅಬ್ದುಲ್ ಅಹಾದ್ ಅವರನ್ನು ಕೆಎಸ್ಆರ್ಟಿಸಿಯ ಭದ್ರತೆ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.