ಮಡಿಕೇರಿ, ಜ. ೨೭: ಮೂವರು ಅಸ್ಸಾಂ ಮೂಲದ ಮಹಿಳೆಯರು ಬಸ್ ಏರುತ್ತಿದ್ದ ಉಪನ್ಯಾಸಕಿ ಒಬ್ಬರ ಪರ್ಸ್ ಅಪಹರಿಸಿರುವ ಘಟನೆ ಇಲ್ಲಿನ ಜ.ತಿ. ವೃತ್ತದ ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಪರ್ಸ್ನಲ್ಲಿದ್ದ ಇಪ್ಪತ್ತು ಸಾವಿರ ನಗದು, ಚಿನ್ನದ ಮೂಗುತಿ, ಎ.ಟಿ.ಎಂ., ಆಧಾರ್, ಪಾನ್ ಮತ್ತು ಮತದಾರರ ಚೀಟಿ ಇದ್ದುದಾಗಿ ನತದೃಷ್ಟೆ ಚಂದ್ರಿಕಾ ದೂರಿದ್ದಾರೆ.

ಇಲ್ಲಿನ ಜೂನಿಯರ್ ಕಾಲೇಜು ಉಪನ್ಯಾಸಕಿ ಚಂದ್ರಿಕಾ, ತಮ್ಮ ಹತ್ತು ವರುಷದ ಮಗುವಿನೊಂದಿಗೆ ತಾ. ೨೪ರ ಸಂಜೆ ಮಂಗಳೂರು ರಸ್ತೆಯ ತಿರುವಿನ ತಂಗುದಾಣದಲ್ಲಿ ಅರುವತ್ತೋಕ್ಲು ಬಸ್ಸಿಗಾಗಿ ಕಾಯುತ್ತಿದ್ದರು. ಬಸ್ಸಿಗೆ ಬಹಳ ಮಂದಿ ಕಾಯುತ್ತಿದ್ದು, ಜೊತೆಗೆ ಮೂವರು ಅಸ್ಸಾಮಿ ಕಾರ್ಮಿಕ ಮಹಿಳೆಯರು ಇದ್ದುದನ್ನು ಅವರು ಸುಮ್ಮನೆ ಗಮನಿಸಿದ್ದರು. ಐದು ಗಂಟೆಗೆ ಅರುವತ್ತೋಕ್ಲು ಬಸ್ ಬಂದಾಗ ಬಸ್ ಏರಲು ದಟ್ಟನೆ ಹೆಚ್ಚಿತು. ಇವರು ಬಸ್ಸಿನ ಮೆಟ್ಟಲು ಏರುವಾಗ ಹಿಂದೆ ಈ ಮಹಿಳೆಯರೂ ಹತ್ತಲು ಯತ್ನಿಸುತ್ತಾ, ‘ಬಸ್ ಕಹಾ ಜಾತಾಹೆ ಕಹಾ ಜಾತಾಹೆ’ ಎಂದು ಹೇಳಿದ್ದಾರೆ. ಚಂದ್ರಿಕಾ ಮತ್ತು ಮಗು ನೂಕು ನುಗ್ಗಲಿನಲ್ಲಿ ಬಸ್ ಪ್ರವೇಶಿಸುತ್ತಾರೆ. ೨-೩ ಸೀಟ್ ಮುಂದೆ ಸಾಗುತ್ತಿದ್ದಂತೆ ಹೆಗಲು ಹಗುರ ಆದಂತಾಗಿ ಚೀಲಕ್ಕೆ ಕೈ ಹಾಕಿದ್ದಾರೆ. ಚೀಲದಲ್ಲಿ ಪರ್ಸ್ ಇರಲಿಲ್ಲ. ಗಾಬರಿಯಾಗಿ ಅತ್ತಿತ್ತ ನೋಡಿದರೂ ಕಾಣಲಿಲ್ಲ. ವಿಷಯ ಹೇಳುತ್ತಾ ಬಸ್ಸಿನಿಂದ ಕೆಳಗಿಳಿಯುತ್ತಾರೆ. ಇವರು ಇಳಿಯುತ್ತಿರುವಾಗ ಬಸ್ಸಿನ ಹಿಂದೆ ಬಂದು ನಿಂತಿದ್ದ ಪುತ್ತೂರು ಬಸ್ ಹೊರಡುತ್ತದೆ. ಕೂಡಲೇ ಇವರಿಗೆ ಅಸ್ಸಾಮಿ ಮಹಿಳೆಯರ ನೆನಪಾಗುತ್ತಾರೆ. ಅವರು ಇವರಿದ್ದ ಬಸ್ ಏರಲಿಲ್ಲ. ತಂಗುದಾಣದಲ್ಲೂ ಇರಲಿಲ್ಲ. ಹಾಗಿದ್ದರೆ ಪುತ್ತೂರು ಬಸ್ ಹತ್ತಿ ಹೋಗಿದ್ದಾರೆಂದು ಖಾತ್ರಿಯಾಗಿ ೧೧೨ ಸಂಖ್ಯೆಗೆ ಕರೆ ಮಾಡಿ ಹೇಳಿದ್ದಾರೆ. ಮಂಗಳೂರು ರಸ್ತೆಯ ಆಚೆ - ಈಚೆ ಓಡಾಡಿ ಯಾರಾದರೂ ಪುತ್ತೂರು ಬಸ್ ನಿಲ್ಲಿಸಿ ಎಂದರೂ ಅಲ್ಲಿ ಸುಮ್ಮನೆ ನಿಂತಿದ್ದ ಗಂಡಸರು ಯಾರೂ ಮುಂದೆ ಬರಲಿಲ್ಲ ಎಂದು ಉಪನ್ಯಾಸಕಿ ಚಂದ್ರಿಕಾ ‘ಶಕ್ತಿ’ಯೊಂದಿಗೆ ಹೇಳಿ ಮರುಗಿದರು.

ಈ ಕುರಿತು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಘಟನೆಯ ಕುರಿತು ಎಸ್.ಐ. ಅಂತಿಮ ‘ಶಕ್ತಿ’ಯೊಂದಿಗೆ ಮಾತನಾಡಿ, ೧೧೨ಕ್ಕೆ ಕರೆ ಮಾಡಿದಾಗ ಅವರು ನಗರ ಠಾಣೆಗೆ ತಿಳಿಸಿದ್ದು, ಠಾಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಅಲ್ಲಿ ಅಸ್ಸಾಂ ಮಹಿಳೆಯರ ಸುಳಿವು ಕಾಣಲಿಲ್ಲ ಎಂದಿದ್ದಾರೆ. ಒಂದೆರಡು ಸಿಸಿ ಟಿವಿ ರೆಕಾರ್ಡ್ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದಿದ್ದಾರೆ.