ಮಡಿಕೇರಿ, ಜ. ೨೬: ಕೊಡಗಿನ ಲೆಫ್ಟಿನೆಂಟ್ ಕರ್ನಲ್ ಸಾಯ ವಿವೇಕ್ ಗಣರಾಜ್ಯೋತ್ಸವ ಪೆರೇಡ್ ಸಂದರ್ಭ ರುದ್ರ ಹೆಸರಿನ ಯುದ್ಧ ವಿಮಾನ ಪೈಲಟ್ ಆಗಿ ಗಮನ ಸೆಳೆದಿದ್ದಾರೆ.
ಮೂಲತಃ ವೀರಾಜಪೇಟೆ ಬಳಿಯ ಕುಕ್ಲೂರಿನ ನಿವೃತ್ತ ಮೇಜರ್ ಸಾಯಿ ವೆಂಕಟಗಿರಿ ವನಜಾಕ್ಷಿ ದಂಪತಿ ಪುತ್ರರಾದ ವಿವೇಕ್ ಬುಧವಾರ ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪೆರೇಡ್ ಸಂದರ್ಭ ಭಾರತೀಯ ಸೇನಾ ಪಡೆಯ ಯುದ್ಧ ವಿಮಾನ ರುದ್ರವನ್ನು ಸಲೀಸಾಗಿ ಹಾರಿಸಿ ಮೆಚ್ಚುಗೆಗೆ ಪಾತ್ರರಾದರು. ಭಾರತೀಯ ಸೇನೆಯ ಅತ್ಯಾಧುನಿಕ ಯುದ್ಧ ವಿಮಾನವಾಗಿರುವ ರುದ್ರವನ್ನು ವಿವೇಕ್ ಅನೇಕ ವರ್ಷಗಳಿಂದ ಹಾರಿಸುತ್ತಿದ್ದಾರೆ.
೧೬ ವರ್ಷಗಳ ಹಿಂದೆ ಭಾರತೀಯ ಸೇನಾಪಡೆ ಸೇರ್ಪಡೆಯಾದ ವಿವೇಕ್ ಅವರಿಗಿದ್ದ ಹೊಸತನದ ಆವಿಷ್ಕಾರದಲ್ಲಿ ಆಸಕ್ತಿಯ ಹಿನ್ನೆಲೆಯಲ್ಲಿ ರುದ್ರ ವಿಮಾನದ ಹಾರಾಟದ ಅವಕಾಶ ಸಿಕ್ಕಿತು. ೨೦೧೭ ಮತ್ತು ೨೦೧೯ರಲ್ಲಿ ಮೇಜರ್ ಆಗಿ ರುದ್ರವನ್ನು ಗಣರಾಜ್ಯೋತ್ಸವ ಸಂದರ್ಭ ಹಾರಿಸಿದ್ದ ವಿವೇಕ್ ಲೆಫ್ಟಿನೆಂಟ್ ಕರ್ನಲ್ ಆಗಿ ಭಡ್ತಿ ಹೊಂದಿದ ಮೇಲೆ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪೆರೇಡ್ನಲ್ಲಿ ರುದ್ರವನ್ನು ಕೊಂಡೊಯ್ದಿದ್ದಾರೆ ಎಂದು ವಿವೇಕ್ ತಂದೆ ನಿವೃತ್ತ ಮೇಜರ್ ವೆಂಕಟಗಿರಿ ಸಂತೋಷ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಬೆಂಗಳೂರಿನಲ್ಲಿ ೨೦೧೭ರಲ್ಲಿ ಆಯೋಜಿತ ಏರೋ ಶೋದಲ್ಲಿ ಕೂಡ ವಿವೇಕ್ ರುದ್ರದ ಸಾರಥಿಯಾಗಿದ್ದು ವಿಶೇಷ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿವೇಕ್, ಭಾರತೀಯ ಸೇನಾಪಡೆಯಲ್ಲಿ ಒಬ್ಬನಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಗಣರಾಜ್ಯೋತ್ಸವದಂದು ಪೆರೇಡ್ನಲ್ಲಿ ನನ್ನ ಪ್ರೀತಿಯ ರುದ್ರ ಜತೆ ಪಾಲ್ಗೊಳ್ಳಲು ಅವಕಾಶ ದೊರಕಿದ್ದು ಸ್ಮರಣೀಯ ಅನುಭವ. ಈ ಪೆರೇಡ್, ಭಾರತೀಯ ಸೇನಾ ಪಡೆಯ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದು ಹೆಮ್ಮೆಯಿಂದ ಹೇಳಿದರು.
- ಅನಿಲ್ ಎಚ್.ಟಿ.