ಮಡಿಕೇರಿ, ಜ. ೨೬: ಮೊದಲ ಡೋಸ್ ಪಡೆದು ೨ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಬಾಕಿ ಉಳಿದವರನ್ನು ಗುರುತಿಸಿ ಜನವರಿ ಅಂತ್ಯದೊಳಗೆ ಲಸಿಕಾರಣದ ಗುರಿ ಮುಟ್ಟುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬAಧ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಲಸಿಕಾ ಪ್ರಗತಿ ಸಂಬAಧಿಸಿದAತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿಶೇ. ೧೦೦ ರಷ್ಟು ಮೊದಲ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ. ಆದರೆ, ೨ನೇ ಡೋಸ್ ಲಸಿಕೆ ನೀಡುವುದು ಇನ್ನೂ ಬಾಕಿ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು. ಮೊದಲ ಡೋಸ್ ಪಡೆದು ೨ನೇ ಡೋಸ್ ಅವಧಿಯಾದರು ಲಸಿಕೆ ಪಡೆಯದವರನ್ನು ಪತ್ತೆಹಚ್ಚಿ ಲಸಿಕೆ ನೀಡುವ ಕರ್ತವ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳದ್ದಾಗಿದೆ. ಬೂಸ್ಟರ್ ಡೋಸ್ ಲಸಿಕೆ ಪಡೆಯದ ಮುಂಚೂಣಿ ಕೋವಿಡ್ ಸೇನಾನಿಗಳಿಗೂ ಲಸಿಕೆ ನೀಡಬೇಕು ಎಂದು ಖಡಕ್ ಆಗಿ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ?, ಐಸಿಯು ಹಾಗೂ ವೆಂಟಿಲೇಟರ್‌ನಲ್ಲಿರುವ ಸೋಂಕಿತರ ಆರೋಗ್ಯ ಸ್ಥಿತಿಯ ಬಗ್ಗೆ ಸಚಿವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಡಾ. ಕೆ. ಕಾರ್ಯಪ್ಪ, ಇಬ್ಬರು ಸೋಂಕಿತರು ವೆಂಟಿಲೇಟರ್‌ನಲ್ಲಿದ್ದಾರೆ. ೧೦ ಮಂದಿ ಐಸಿಯುನಲ್ಲಿದ್ದು, ೪೫ ಜನ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಮಾಹಿತಿ ನೀಡಿದರು.
ಕೊರೊನಾ ಸೋಂಕಿಗೆ ತುತ್ತಾಗಿರುವ ಜಿಲ್ಲೆಯ ಶಾಲಾ-ಕಾಲೇಜುಗಳ
(ಮೊದಲ ಪುಟದಿಂದ) ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಸಚಿವ ಬಿ.ಸಿ. ನಾಗೇಶ್ ಪ್ರಶ್ನೆಗೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ, ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾದ ಹಿನ್ನೆಲೆ ಜಿಲ್ಲೆಯ ೧೨ ಶಾಲೆಗಳು ಬಂದ್ ಆಗಿವೆ. ೦ ಯಿಂದ ೯ ವಯೋಮಾನದ ೧೨೨ ಮಕ್ಕಳಿಗೆ, ೧೦ ರಿಂದ ೧೮ ವಯೋಮಾನದ ೧೦೩೧ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿ ಕೊಂಡಿತ್ತು. ಇದರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಡಿಡಿಪಿಯು ಪುಟ್ಟರಾಜು, ಸದ್ಯ ೪ ಕಾಲೇಜುಗಳಿಗೆ ರಜೆ ನೀಡಿದ್ದು, ೬೫ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ ಎಂದು ವಿವರಿಸಿದರು. ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸರಿಯಾಗಿದ್ದು, ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ. ಶಾಲೆಗಳನ್ನು ಕಾಲ ಕಾಲಕ್ಕೆ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಉತ್ತರಿಸಿದರು.
ಪಿ.ಯು ಕಾಲೇಜು ವ್ಯಾಪ್ತಿಯಲ್ಲಿನ ಉಪನ್ಯಾಸಕರು. ಅತಿಥಿ ಉಪನ್ಯಾಸಕರು, ಸಿಬ್ಬಂದಿಗಳ ಮಾಹಿತಿ ಒದಗಿಸುವಂತೆ ಸಚಿವರು ಹೇಳಿದರು. ಅರ್ಹರೆಲ್ಲರೂ ಕೋವಿಡ್ ನಿಯಂತ್ರಣ ಲಸಿಕೆ ಪಡೆಯಬೇಕು, ಪಡೆಯದಿದ್ದಲ್ಲಿ ಪಡೆಯುವಂತೆ ಮನವರಿಕೆ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.
ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ವೇತನ ಪಾವತಿಸುವಂತೆ ಸೂಚಿಸಿದರು. ಅಪ್ಪಚ್ಚು ರಂಜನ್ ಅವರು ಸ್ಥಳೀಯ ಏಜೆನ್ಸಿಗಳಿಗೆ ಅವಕಾಶ ಮಾಡುವಂತೆ ಅವರು ಸಲಹೆ ನೀಡಿದರು.
ವೀರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ಅಲ್ಲಿನ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಆದ್ದರಿಂದ ವೈದ್ಯರನ್ನು ನಿಯೋಜಿಸುವಂತೆ ಕೆ.ಜಿ ಬೋಪಯ್ಯ ಸೂಚಿಸಿದರು.
ಕಾಟಾಚಾರಕ್ಕೆ ವರದಿ ನೀಡಬೇಡಿ
ಕೋವಿಡ್ ಸಂಬAಧಿತ ಮಾಹಿತಿಯ ಅಂಕಿ-ಅAಶಗಳ ಬಗ್ಗೆ ಸಚಿವರಾದ ಬಿ.ಸಿ. ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು. ಸಮರ್ಪಕವಾಗಿ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಕಾಟಾಚಾರಕ್ಕೆ ವರದಿ ನೀಡದೆ, ಜಿಲ್ಲೆಯ ಹಿತದೃಷ್ಟಿಯಲ್ಲಿ ನೀಡುವಂತೆ ಖಾರವಾಗಿ ನುಡಿದರು.
ಶಿಕ್ಷಣ ಇಲಾಖೆ ಕ್ರಮಬದ್ಧವಾಗಿ ಕೆಲಸ ಮಾಡಬೇಕು. ಶಾಲೆಗೆ ಬರುತ್ತಿರುವ ಮಕ್ಕಳ ದಿನನಿತ್ಯ ಹಾಜರಿಯ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ನೀಡಬೇಕು. ಶ್ರಮವಹಿಸಿ ಸರಕಾರ ಶಾಲೆಗಳನ್ನು ತೆರೆದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು.
ಕೊರೊನಾ ನಿಯಂತ್ರಣದಲ್ಲಿದೆ - ನಿಗದಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಬಿ.ಸಿ. ನಾಗೇಶ್, ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ಇದೀಗ ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಕೂಡ ಕಡಿಮೆ ಇದೆ. ೨ನೇ ಡೋಸ್ ಲಸಿಕೆ ಗುರಿ ಮುಟ್ಟುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಕೋವಿಡ್ ಪಾಸಿಟಿವ್ ಬಂದಲ್ಲಿ ಹೋಮ್ ಐಸೋಲೇಷನ್ ಹಾಗೂ ಆಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತಿದ್ದು, ವೈದ್ಯಕೀಯ ಸೇವೆ ಕಲ್ಪಿಸಲಾಗುತ್ತಿದೆ. ಅರ್ಹರೆಲ್ಲರು ಕೋವಿಡ್ ಲಸಿಕೆ ಪಡೆಯಬೇಕು. ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆಯಬೇಕು. ಎಸ್‌ಎಸ್‌ಎಲ್.ಸಿ ಪರೀಕ್ಷೆಯು ನಿಗದಿಯಂತೆ ನಡೆಯಲಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು.
ನಗರಸಭೆ ಶಾಲೆಗಳ ನಿರ್ವಹಣೆ ಸಂಬAಧ ತಾ. ೨೬ ರಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಈ ಸಂದರ್ಭ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಜರಿದ್ದರು.