ಮಡಿಕೇರಿ, ಜ. ೨೬: ಕಳೆದ ೧೫ ವರ್ಷಗಳಿಂದ ವಸತಿ ಯೋಜನೆಯನ್ನು ಜಾರಿಗೊಳಿಸದ ಮಡಿಕೇರಿ ನಗರಸಭೆ ಬಡವರನ್ನು ನಿರ್ಲಕ್ಷಿಸುತ್ತಲೇ ಬರುತ್ತಿದ್ದು, ‘ಹೌಸಿಂಗ್ ಫಾರ್ ಆಲ್’ ಅಭಿಯಾನದ ೧೧೨೬ ಅರ್ಜಿದಾರರಿಗೆ ಮನೆಗಳನ್ನು ನಿರ್ಮಿಸಿಕೊಡದಿದ್ದಲ್ಲಿ ಅರ್ಹ ಫಲಾನುಭವಿಗಳೊಂದಿಗೆ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಎಚ್ಚರಿಕೆ ನೀಡಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್ ಹಾಗೂ ಮಡಿಕೇರಿ ನಗರಾಧ್ಯಕ್ಷ ಕೆ.ಜಿ.ಪೀಟರ್ ವಸತಿ ರಹಿತ ಕಡು ಬಡವರನ್ನು ಕಡೆಗಣಿಸುತ್ತಲೇ ಬರುತ್ತಿರುವ ನಗರಸಭೆ ವಸತಿ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲವೆಂದು ಟೀಕಿಸಿದ್ದಾರೆ.

ಸುಮಾರು ೨೦ ವರ್ಷಗಳ ಹಿಂದೆ ರಾಜೇಶ್ವರಿ ನಗರದಲ್ಲಿ ಮಾಜಿ ಸಚಿವ ಎಂ.ಎA.ನಾಣಯ್ಯ ಅವರ ಅವಧಿಯಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಲಾಗಿತ್ತು. ಇದಾದ ನಂತರ ಇಲ್ಲಿಯವರೆಗೆ ನಗರಸಭೆ ಬಡವರಿಗಾಗಿ ಯಾವುದೇ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ಪ್ರತಿ ಸಭೆಗಳಲ್ಲಿ ವಸತಿ ಯೋಜನೆಯ ಕುರಿತು ಚರ್ಚೆಗಳು ನಡೆಯುತ್ತದೆಯೇ ಹೊರತು ಅನುಷ್ಠಾನಕ್ಕೆ ತರುವ ಕಾಳಜಿ ಯಾರಿಗೂ ಇಲ್ಲದಾಗಿದೆ. ೨೦೧೬ ರಲ್ಲಿ “ಹೌಸಿಂಗ್ ಫಾರ್ ಆಲ್” ಅಭಿಯಾನದಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಸುಮಾರು ೧೧೨೬ ಅರ್ಜಿದಾರರು ಮನೆಗಾಗಿ ಅರ್ಜಿ ಸಲ್ಲಿಸಿದ್ದು, ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಇರುವುದಕ್ಕೊಂದು ಸ್ವಂತ ಸೂರು ಸಿಗಬಹುದೆನ್ನುವ ನಿರೀಕ್ಷೆಯಿಂದ ದಿನದ ಕೆಲಸವನ್ನು ಬಿಟ್ಟು ನಗರಸಭಾ ಕಚೇರಿಗೆ ಅಲೆದಿದ್ದಾರೆ. ಆದರೆ ಇಷ್ಟು ವರ್ಷಗಳೇ ಕಳೆದರೂ ಅರ್ಜಿಗಳು ವಿಲೇವಾರಿಯಾಗಿಲ್ಲ, ಅರ್ಜಿದಾರರು ನಿರಾಸೆಯಿಂದ ಬಾಡಿಗೆ ಮನೆಗಳಲ್ಲೇ ಜೀವನ ಸಾಗಿಸುವಂತಾಗಿದೆ.

ದುಬಾರಿ ಬೆಲೆಯ ಈ ದಿನಗಳಲ್ಲಿ ಮನೆ ಬಾಡಿಗೆ ನೀಡಲು ಸಾಧ್ಯವಾಗದೆ ಪರದಾಡುತ್ತಿರುವ ಸಾವಿರಾರು ಬಡ ಕುಟುಂಬಗಳು ನಗರದಲ್ಲಿವೆ. ವರ್ಷಕ್ಕೆ ಕನಿಷ್ಟ ನೂರು ಮನೆಗಳನ್ನಾದರೂ ನೀಡಲಾಗದ ನಗರಸಭೆ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿರುವ ಉಸ್ಮಾನ್ ಹಾಗೂ ಪೀಟರ್, ಖಾಲಿ ಇರುವ ಸರ್ಕಾರಿ ಜಾಗಗಳನ್ನು ಮತ್ತು ಒತ್ತುವರಿಯಾಗಿರುವ ಜಾಗವನ್ನು ವಶಕ್ಕೆ ಪಡೆದು ನಿವೇಶನಗಳನ್ನಾಗಿ ಪರಿವರ್ತಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಮುಂದಿನ ಒಂದು ತಿಂಗಳೊಳಗೆ ವಸತಿಗೆ ಸಂಬAಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದಲ್ಲಿ ‘ಹೌಸಿಂಗ್ ಫಾರ್ ಆಲ್’ ಅಭಿಯಾನದಡಿ ಮನೆಗಾಗಿ ಅರ್ಜಿ ಸಲ್ಲಿಸಿದ ೧೧೨೬ ಅರ್ಜಿದಾರರನ್ನು ಒಗ್ಗೂಡಿಸಿ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೌರ ಕಾರ್ಮಿಕರ ಕಡೆಗಣನೆ

ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರು ಕಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದು, ಇಲ್ಲಿಯವರೆಗೆ ಇವರುಗಳಿಗೆ ಸ್ವಂತ ಸೂರನ್ನು ಕಲ್ಪಿಸಿಕೊಡಲು ನಗರಸಭೆಗೆ ಸಾಧ್ಯವಾಗಿಲ್ಲ. ಜಿಲ್ಲೆಗೆ ಬಂದ ಎಲ್ಲಾ ಜಿಲ್ಲಾಧಿಕಾರಿಗಳು ಪ್ರತಿವರ್ಷ ಸಭೆ ನಡೆಸಿ ಪೌರ ಕಾರ್ಮಿಕರಿಗೆ ವಸತಿ ಕಲ್ಪಿಸಲು ಜಾಗ ಗುರುತಿಸಿ ಕ್ರಮ ಕೈಗೊಳ್ಳಿ ಎಂದು ನಗರಸಭೆಗೆ ಸೂಚನೆ ನೀಡುತ್ತಲೇ ಬರುತ್ತಿದ್ದಾರೆ. ಆದರೆ ಪೌರ ಕಾರ್ಮಿಕರನ್ನು ನಿರಂತರವಾಗಿ ನಿರ್ಲಕ್ಷಿಸುತ್ತಲೇ ಬರುತ್ತಿರುವ ನಗರಸಭೆ ಸೂರು ನೀಡದೆ ವಂಚಿಸಿದೆ ಎಂದು ಪೀಟರ್ ಹಾಗೂ ಉಸ್ಮಾನ್ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳು ಬದಲಾಗುತ್ತಲೇ ಇದ್ದಾರೆ, ಆದರೆ ಪೌರ ಕಾರ್ಮಿಕರಿಗೆ ವಸತಿ ನೀಡಬೇಕೆನ್ನುವ ನಿರ್ಣಯ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇದೆ. ಕಳೆದ ೨೦ ವರ್ಷಗಳಲ್ಲಿ ಅನೇಕ ಪೌರ ಕಾರ್ಮಿಕರು ನಿವೃತ್ತಿ ಹೊಂದಿದ್ದಾರೆ. ಆದರೆ ತಮ್ಮ ಕನಸಿನ ಮನೆ ಮಾತ್ರ ಕನಸಾಗಿಯೇ ಉಳಿದಿದೆ.

ಸರ್ಕಾರದ ಮೂಲಕ ಲಭ್ಯತೆ ಇರುವ ಎಲ್ಲಾ ವಸತಿ ಯೋಜನೆಗಳ ಮೂಲಕ ಮಡಿಕೇರಿ ನÀಗರದ ಕಡು ಬಡವರಿಗೆ ವಸತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಉಸ್ಮಾನ್ ಹಾಗೂ ಪೀಟರ್ ಒತ್ತಾಯಿಸಿದ್ದಾರೆ.