*ಗೋಣಿಕೊಪ್ಪ, ಜ. ೨೬: ಯರವ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗೋಣಿಕೊಪ್ಪದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಅರೆಬೆತ್ತಲೆ ಪಾದಯಾತ್ರೆ ನಡೆಸುವುದಾಗಿ ಜಿಲ್ಲಾ ಯುರವ ಯುವ ಸಮುದಾಯದ ಗೌರವ ಅಧ್ಯಕ್ಷ ಪಿ.ಎಸ್. ಮುತ್ತ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಯರವ ಯುವ ಒಕ್ಕೂಟ ವತಿಯಿಂದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯುವ ಪ್ರತಿಭಟನೆಯ ಬಗ್ಗೆ ಮನವಿ ಪತ್ರವನ್ನು ನೀಡಿ ಮಾತನಾಡಿದ ಅವರು, ೧೫ ದಿವಸಗಳ ಒಳಗೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹದಿನೈದು ದಿನದ ಒಳಗೆ ನಮ್ಮ ಬೇಡಿಕೆಗಳು ಈಡೇರಿಸುವ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅರಬೆತ್ತಲೆ ಪಾದಯಾತ್ರೆ ನಡೆಸುವುದು ನಿಶ್ಚಯ ಎಂದು ಎಚ್ಚರಿಸಿದ್ದಾರೆ.

ಯರವ ಸಮುದಾಯ ಬದುಕಲು ಭೂಮಿ ಕೊಡಿ ಎಂದು ಬೇಡಿಕೆಯನ್ನು ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಆದರೂ, ನಮ್ಮ ಸಮಸ್ಯೆಗೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ ನಮ್ಮ ಸಮುದಾಯದ ಮೇಲೆ ಏಕೆ ಈ ರೀತಿಯ ನಿರ್ಲಕ್ಷ ಧೋರಣೆ ಎಂದು ಪ್ರಶ್ನಿಸಿದ ಅವರು, ಪ್ರಾಚೀನ ಬುಡಕಟ್ಟು ಆದಿವಾಸಿಗಳಾದ ನಮ್ಮ ಯರವ ಜನಾಂಗವನ್ನು ಮೂಲನಿವಾಸಿಗಳು ಎಂದು ಘೋಷಣೆ ಮಾಡುವಂತೆ ಸೇರಿ ಸುಮಾರು ಎಂಟು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಮಾಹಿತಿ ನೀಡಲಾಗಿದೆ.

ವಿದ್ಯಾವಂತ ಯುವಕ, ಯುವತಿಯರಿಗೆ ಸರ್ಕಾರದ ಕೆಲಸಗಳಲ್ಲಿ ನೇರ ನೇಮಕಾತಿಗೆ ಅವಕಾಶ ಕಲ್ಪಿಸುವಂತೆ, ಸರ್ಕಾರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನದ ವಿದ್ಯಾರ್ಥಿವೇತನ, ಮೆರಿಟ್ ಆಧಾರದಲ್ಲಿ ನಡೆಯುವ ಸರ್ಕಾರಿ ಕೆಲಸದ ನೇಮಕಾತಿಯಲ್ಲಿ ಬಿಪಿಎಲ್ ಕುಟುಂಬದ ಮಾನದಂಡವಾಗಿ ಪರಿಗಣಿಸಿ ಸಮುದಾಯವನ್ನು ಸರಕಾರಿ ಉದ್ಯೋಗದ ನೇಮಕಾತಿಯಲ್ಲಿ ತರುವಂತೆಯೂ, ಹೊರ ರಾಜ್ಯಗಳಿಂದ ಬಂದವರಿಗೆ ಭೂಮಿಯನ್ನು ನೀಡಿದ ಕೊಡಗು ಜಿಲ್ಲೆಯಲ್ಲಿ ಪಾರಂಪರಿಕವಾಗಿ ವಾಸಮಾಡುತ್ತಿರುವ ಯರವ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಂಡು ಕೃಷಿ ಭೂಮಿಗಳನ್ನು ನೀಡುವಂತೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಅಧ್ಯಕ್ಷ ವೈ.ಸಿ ಶಂಕರು, ಕಾರ್ಯದರ್ಶಿ ವೈ.ಎನ್ ಸಿದ್ದ, ಸಂಘಟನಾ ಕಾರ್ಯದರ್ಶಿ ಪಿ.ಸಿ ಸುರೇಶ್, ಸದಸ್ಯರುಗಳಾದ ವೈ.ಬಿ ಗಣೇಶ್ ಬಾಳಜಿ, ಪಿ ಮೋಹನ್ ಪಿ.ಹೆಚ್.ಎಸ್ ಕಾಲೋನಿ, ಸುಬ್ರಮಣಿ ಹಳ್ಳಿಗಟ್ಟು ಪಿ.ಎಂ. ರಾಮ್ ದೇವರಪುರ ಪಿ.ಜೆ. ಸುಬ್ರಹ್ಮಣ್ಯ ದೇವರಪುರ ಹಾಜರಿದ್ದರು.