ಗೋಣಿಕೊಪ್ಪಲು, ಜ. ೨೬: ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೊಡ್ಲೂರುವಿನಲ್ಲಿ ನೆಲೆಸಿರುವ ಆದಿವಾಸಿಗಳಿಗೆ ವಾಸಿಸಲು ನಿವೇಶನದೊಂದಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.

ಗಣರಾಜ್ಯೋತ್ಸವ ದಿನದಂದು ಪೊನ್ನಂಪೇಟೆ ತಾಲೂಕು ಕಚೇರಿಯ ಮುಂದೆ ದಸಂಸ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ ಮುಂದಾಳತ್ವದಲ್ಲಿ ಹೋರಾಟ ನಡೆದು, ತಮ್ಮ ಬೇಡಿಕೆಯನ್ನು ಈಡೇರಿಸಲು ಜಿಲ್ಲಾಡಳಿತಕ್ಕೆ ತಿಂಗಳ ಗಡುವು ನೀಡಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ದಸಂಸ ಸಂಚಾಲಕ ಹೆಚ್.ಆರ್. ಪರಶುರಾಮ್, ಕಳೆದ ಐದು ವರ್ಷ ಗಳಿಂದ ಹೈಸೊಡ್ಲೂರು ಭಾಗದಲ್ಲಿ ನೆಲೆಸಿರುವ ೭೪ ಕುಟುಂಬಗಳು ವಾಸವಾಗಿದ್ದಾರೆ. ಇವರಿಗೆ ಮನೆ ಹಾಗೂ ನಿವೇಶನ ನೀಡಲು ಒತ್ತಾಯ ಮಾಡುತ್ತಾ ಬಂದಿದ್ದೇವೆ. ಈ ಬಗ್ಗೆ ವಿವಿಧ ರೀತಿಯ ಪ್ರತಿಭಟನೆ, ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಈ ಬಗ್ಗೆ ಜಿಲ್ಲಾಡಳಿತ ಬಡವರ ವಿಷಯ ದಲ್ಲಿ ಕಾಳಜಿ ವಹಿಸಿಲ್ಲ. ಇದರಿಂದಾಗಿ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಈ ಹೋರಾಟ ಆರಂಭ ಹೊರತು ಅಂತ್ಯವಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸದಿದ್ದಲ್ಲಿ ಡಿಸಿ ಕಚೇರಿಯ ಮುಂದೆ ರಾಜ್ಯ ದಸಂಸ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಸಂಸ ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ ಬೆಳ್ಳೂರು ಮಾತನಾಡಿ, ನಮ್ಮ ಹೋರಾಟ ಸರ್ಕಾರದ ವಿರುದ್ಧ ಹೊರತು ಬೇರೆ ಯಾವ ಶ್ರೀಮಂತರ ವಿರುದ್ಧವಲ್ಲ, ಹೈಸೊಡ್ಲೂರು ಜಾಗದಲ್ಲಿ ವಾಸವಿರುವ ಕುಟುಂಬಗಳು ಈ ನಾಡಿನ ಮಣ್ಣಿನ ಮಕ್ಕಳು ಎಂದ ಅವರು ಆದಿವಾಸಿಗಳಿಗೆ ಇನ್ನೂ ಕೂಡ ಮನೆ ನಿವೇಶನ ನೀಡಲು ಇಲಾಖೆ ಮನಸ್ಸು ಮಾಡುತ್ತಿಲ್ಲ.

ಈ ಭೂಮಿಯ ಸುತ್ತಮುತ್ತಲಿನ ನೂರಾರು ಎಕರೆ ಭೂಮಿ ಒತ್ತುವರಿಯಾಗಿದೆ. ಈ ಬಗ್ಗೆ ನಾವುಗಳು ಪ್ರತಿಭಟನೆ ನಡೆಸುತ್ತಿಲ್ಲ. ನಮ್ಮ ಹೋರಾಟ ಸರ್ಕಾರದ ಹೆಸರಿನಲ್ಲಿರುವ ಎಂಟು ಎಕರೆ ಜಾಗಕ್ಕೆ ಹೊರತು ಬೇರೆ ಜಾಗಕ್ಕೆ ಅಲ್ಲ ಎಂದರು. ಜಿಲ್ಲಾ ಸಂಘಟನಾ ಸಂಚಾಲಕ ರಜನಿಕಾಂತ್ ಮಾತನಾಡಿದರು.

ಹೋರಾಟಗಾರದ ಟಿ.ಎನ್. ಗೋವಿಂದಪ್ಪ,ಕುಮಾರ್ ಮಹದೇವ್, ಜೆ.ಎಂ. ಸೋಮಯ್ಯ, ಎಸ್.ಟಿ. ಗಿರೀಶ್, ಸಮಾಜ ಸೇವಕಿ ಕುಸುಮ ಚಂದ್ರಶೇಖರ್, ಕಳ್ಳಿರ ಹರೀಶ್ ಸೇರಿದಂತೆ ಇನ್ನಿತರ ಪ್ರಮುಖರು ಈ ವೇಳೆ ಮಾತನಾಡಿ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ತಾಲೂಕು ತಹಶೀಲ್ದಾರ್ ಪ್ರಶಾಂತ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಬಡವರ ನ್ಯಾಯಯುತ ಬೇಡಿಕೆಯ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ, ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕಾನೂರು ಜಂಕ್ಷನ್ ನಿಂದ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಪ್ರತಿಭಟನಾಕಾರರು ತಾಲೂಕು ಕಚೇರಿಯ ಮುಂದೆ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.

- ಹೆಚ್.ಕೆ. ಜಗದೀಶ್