ಸಿದ್ದಾಪುರ, ಜ. ೨೬: ಕಣ್ಣಂಗಾಲ ಗ್ರಾಮದ ಕುಡಿಯುವ ನೀರು, ಕಾಡಾನೆ ಹಾವಳಿ, ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚೆ ನಡೆಯಿತು.

ಕಣ್ಣಂಗಾಲ ಗ್ರಾ.ಪಂ ಅಧ್ಯಕ್ಷ ಟಿ.ವಿ ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಗ್ರಾ.ಪಂ ಗಮನಕ್ಕೆ ತಂದರು. ಗ್ರಾಮಸ್ಥರಾದ ದಶರತ್ ಮಾತನಾಡಿ, ಕಣ್ಣಂಗಾಲ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ. ಕಾಡಾನೆ ಹಾವಳಿ ಹೆಚ್ಚಾಗಿರುವ ಪ್ರದೇಶವಾಗಿದ್ದರೂ, ಪ್ರಮುಖ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದೇ ಸಮಸ್ಯೆ ಉಂಟಾಗಿದೆ. ಹಾಗಾಗಿ ಮುಖ್ಯ ರಸ್ತೆಗಳ ಕಂಬಗಳಿಗೆ ಬೀದಿ ದೀಪ ಅಳವಡಿಸುವಂತೆ ಒತ್ತಾಯಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಜಲ ಜೀವನ್ ಯೋಜನೆಯ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡುತ್ತಿರುವುದಾಗಿ ಆರೋಪಿಸಿದರು. ಯೋಜನೆಯನ್ನು ವೈಜ್ಞಾನಿಕವಾಗಿ ಮಾಡುವದಾದರೆ ಕಾವೇರಿ ನದಿಯಿಂದ ನೀರು ಸಂಗ್ರಹ ಮಾಡಿ ಟ್ಯಾಂಕಿನ ಮೂಲಕ ೩ ಗ್ರಾಮಗಳಿಗೆ ನೀರು ಒದಗಿಸುವಂತಾಗಬೇಕು. ಜಲಜೀವನ್ ಯೋಜನೆಯ ಅಂದಾಜು ಮೊತ್ತ ೯೬ ಲಕ್ಷವಾಗಿದ್ದು ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ವೈಜ್ಞಾನಿಕವಾಗಿ ಮಾಡುವಂತಾಗಬೇಕು. ಈಗಾಗಲೇ ಹಲವೆಡೆ ಕಾಟಾಚಾರಕ್ಕೆ ಪೈಪ್ ಲೈನ್ ಮಾತ್ರ ಅಳವಡಿಸಲಾಗಿದೆ ಎಂದು ದೂರಿದರು.

ಬೆಳೆಗಾರ ಸುಜಿತ್ ಮಾತನಾಡಿ, ಗ್ರಾಮದ ವಿವಿಧ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ರಸ್ತೆ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ವಿವಿಧ ಇಲಾಖೆಗಳಿಂದ ಆಗಮಿಸಿದ ಅಧಿಕಾರಿಗಳು ಸರಕಾರದ ಸೌಲಭ್ಯಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಇತ್ತೀಚೆಗೆ ಕಣ್ಣಂಗಾಲ ಗ್ರಾ.ಪಂ ಗ್ರಾಮಸಭೆ ನಿಗಧಿಯಾಗಿ ಸಭೆ ನಡೆಸಲಾಗಿತ್ತು. ಆದರೇ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮಸಭೆಯನ್ನು ಭಹಿಷ್ಕರಿಸಿದ್ದರು. ಇದಾದ ಬಳಿಕ ಮತ್ತೊಮ್ಮೆ ಗ್ರಾಮ ಸಭೆ ನಡೆಸಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಮಟ್ಟದಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆAದು ಬೆಳೆಗಾರರಾದ ಸುಜಿತ್ ಸೇರಿದಂತೆ ಗ್ರಾಮಸ್ಥರು ತಿಳಿಸಿದರು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಗ್ರೀಷ್ಮ, ಸದಸ್ಯರುಗಳಾದ ಜೀವನ್‌ಕುಮಾರ್ ,ಕಲ್ಪೇಶ್, ವನಿತಾ, ರಜನಿ ಕುಟ್ಟಪ್ಪ, ಪುನೀತ್, ಲೋಕೇಶ್ , ಶಾಂತಿ, ಸುಮಿತ್ರಾ ಗ್ರಾಮ ಅಭಿವೃದ್ಧಿ ಅಧಿಕಾರಿ ಧರಣಿ, ಗ್ರಾಮಸ್ಥರಾದ ರಾಬಿನ್, ಲೋಕೇಶ್, ಅಜಿತ್, ವಾಸು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.