ಮಡಿಕೇರಿ, ಜ. ೨೫: ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮವಸ್ತç ಧರಿಸುವ ನಿಯಮವನ್ನು ತಾರತಮ್ಯವಿಲ್ಲದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಿಗೆ ಮನವಿ ಮಾಡಲಾಗಿದೆ.

ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಹೆಗ್ಗುರುತಾಗಿ ವಿದ್ಯಾರ್ಥಿಗಳಿಗೆ ಸಮವಸ್ತç ಧರಿಸುವ ನಿಯಮಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಕೆಲವು ಸಂಘಟನೆಗಳು ಶಾಲಾ-ಕಾಲೇಜುಗಳಲ್ಲೂ ಶೈಕ್ಷಣಿಕ ಸಾಮರಸ್ಯವನ್ನು ಕದಡಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಸಲುವಾಗಿ ಒಂದು ಕೋಮಿನ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಬುರ್ಕಾ-ಹಿಜಾಬ್ ಧರಿಸಿ ಶಾಲಾ-ಕಾಲೇಜಿನ ಆವರಣದೊಳಗೆ ಪ್ರವೇಶಿಸುವಂತೆ ಒತ್ತಡ ಹೇರುತ್ತಿರುವುದು ಕಂಡುಬರುತ್ತಿದೆ.

ಈ ವಿಷಯವನ್ನು ಹಿಂದೂ ಜಾಗರಣಾ ವೇದಿಕೆ ಹಿಂದೂ ಯುವ ವಾಹಿನಿಯು ಗಂಭೀರವಾಗಿ ಪರಿಗಣಿಸಿದ್ದು, ಶಾಲಾ-ಕಾಲೇಜಿನ ಆವರಣದೊಳಗೆ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡಬಾರದು. ಶಾಲಾ-ಕಾಲೇಜು ಆಡಳಿತ ಮಂಡಳಿಗಳು, ಶಿಕ್ಷಣ ಇಲಾಖೆ ಹಾಗೂ ಸರಕಾರಗಳು ಇದಕ್ಕೆ ಅವಕಾಶ ನೀಡಬಾರದು ಹಾಗೂ ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಕೆಡದಂತೆ ಗಮನಹರಿಸಬೇಕು.

ಸಾಮಾಜಿಕ ನ್ಯಾಯಕ್ಕಾಗಿ ಹಿಂದೂ ಜಾಗರಣಾ ವೇದಿಕೆ ಹಾಗೂ ಹಿಂದೂ ಯುವ ವಾಹಿನಿಯ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಮನವಿಯಲ್ಲಿ ತಿಳಿಸಲಾಗಿದೆ.