ಕಣಿವೆ, ಜ. ೨೫: ಗ್ರಾಮೀಣ ಪ್ರದೇಶದ ಶ್ರಮಿಕರ ಸಂಚಾರಕ್ಕೆAದು ಗುಡ್ಡೆಹೊಸೂರು ಬಳಿಯ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೆಪ್ಪದಕಂಡಿ ತೂಗುಸೇತುವೆ ಬಳಿ ಅನುಪಯುಕ್ತ ಕಸವನ್ನು ತಂದು ಸುರಿದಿದ್ದರೂ ಕೂಡ ಸ್ಥಳೀಯ ಗುಡ್ಡೆಹೊಸೂರು ಗ್ರಾಮಾಡಳಿತ ಮೌನ ವಹಿಸಿದೆ.

ಕಾವೇರಿ ನದಿಯ ಆಚೆಯ ಪಿರಿಯಾಪಟ್ಟಣ ತಾಲೂಕಿನ ಗಡಿ ಗ್ರಾಮಗಳ ನೂರಾರು ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಕುಶಾಲನಗರದ ವಿವಿಧ ಶಾಲಾ-ಕಾಲೇಜುಗಳನ್ನು ಸೇರಿದ್ದಾರೆ. ಇದೇ ತೂಗು ಸೇತುವೆ ಸಂಪರ್ಕ ಸೇತುವಾಗಿದೆ.

ಆದರೆ ದಾರಿ ಮಧ್ಯೆ ಯಾರೋ ಕಿಡಿಗೇಡಿಗಳು ಅನುಪಯುಕ್ತ ಕಸದ ರಾಶಿಯನ್ನು ತಂದು ಇಲ್ಲಿ ಸುರಿದಿದ್ದರೂ ಕೂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಥವಾ ಆಡಳಿತ ಮಂಡಳಿ ಇಲ್ಲಿನ ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ. ಕೂಡಲೇ ತೂಗುಸೇತುವೆ ಮಾರ್ಗವನ್ನು ಸ್ವಚ್ಛಗೊಳಿಸಿ ಪಾದಚಾರಿಗಳ ಸುಗಮಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.