ಮಡಿಕೇರಿ, ಜ. ೨೪: ಜಿಲ್ಲೆಯಲ್ಲಿ ೨೦೧೮ರಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಜಲ ಪ್ರಳಯದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರಾರ್ಥವಾಗಿ ಆಗಿನ ಸರಕಾರ ಮಾದಾಪುರ ಬಳಿಯ ಜಂಬೂರುವಿನಲ್ಲಿ ನಿರ್ಮಿಸಿಕೊಟ್ಟಿರುವ ಮನೆಗಳಿರುವ ಫೀ.ಮಾ. ಕಾರ್ಯಪ್ಪ ಬಡಾವಣೆಯಲ್ಲಿನ ಸಮಸ್ಯೆಗಳಿಗೆ ಸಂಬAಧಿಸಿದAತೆ ರಾಜೀವ್ ಗಾಂಧಿ ವಸತಿ ನಿಗಮದ (ಕರ್ನಾಟಕ ಹ್ಯಾಬಿಟೇಟ್ ಕೇಂದ್ರ) ಅಧಿಕಾರಿಗಳು ಜಂಬೂರುವಿನಲ್ಲಿ ಉಸ್ತುವಾರಿಯಲ್ಲಿದ್ದ ಅಭಿಯಂತರರನ್ನು ಕೆಲಸದಿಂದ ಬಿಡುಗಡೆ ಮಾಡಿ ಬೇರೆಯವರನ್ನು ನಿಯೋಜನೆ ಮಾಡಿದ್ದಾರೆ. ಅಪಾಯದ ಸ್ಥಿತಿಯಲ್ಲಿರುವ ಮನೆಗಳಿಗೆ ಕಬ್ಬಿಣದ ಸರಳುಗಳು(ರೇಲಿಂಗ್ಸ್) ಅಳವಡಿಸಲು ಹಾಗೂ ಚರಂಡಿ ದುರಸ್ತಿ ಪಡಿಸಲು ಒಟ್ಟು ರೂ. ೨.೪೧ ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಆರಂಭಿಸಲಾಗುವದು. ಸ್ಥಳದಲ್ಲಿ ಕಚೇರಿಯನ್ನು ತೆರೆಯಲಾಗಿದ್ದು, ಸ್ಥಳೀಯರು ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿದ ನಾಲ್ಕು ದಿನಗಳ ಒಳಗಡೆ ಬಗೆಹರಿಸಲಾಗುವದೆಂದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

೨೦೧೮ರಲ್ಲಿ ಭೂಕುಸಿತ ಸಂಭವಿಸಿದ್ದರೂ ಸಂತ್ರಸ್ತರಿಗೆ ೨೦೨೦ರಲ್ಲಿ ಮನೆಗಳನ್ನು ನೀಡಲಾಗಿತ್ತು. ಆದರೆ., ಒಂದು ವರ್ಷದೊಳಗಡೆ, ಅಂದರೆ ಒಂದು ಮಳೆಗಾಲ ಕಳೆಯುವಷ್ಟರಲ್ಲಿ ಮನೆಗಳ ನೈಜ ಚಿತ್ರಣ ಹೊರಬಿದ್ದಿದೆ. ರೂ.೯ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮನೆ ಹಾಗೂ ಇತರ ಸೌಕರ್ಯಗಳು ಕಳಪೆ ಕಾಮಗಾರಿಯಿಂದಾಗಿ ಬಡಾವಣೆಯೇ ಸಮಸ್ಯೆಗಳ ಗೂಡಾಗಿ ಪರಿಣಮಿಸಿತ್ತು. ಈ ಬಗ್ಗೆ ಬಡಾವಣೆ ನಿವಾಸಿಗಳ ದೂರಿನ ಮೇರೆಗೆ ‘ಶಕ್ತಿ’ ಕಳೆದ ತಾ. ೧೮ರಂದು ವಿಸ್ತೃತ ವರದಿ ಪ್ರಕಟಿಸಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಿಗಮದ ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ಅವರು ಕೈಗೊಂಡಿರುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಅಭಿಯಂತರರ ಬಿಡುಗಡೆ..!

ತಾ. ೨೨ರಂದು ಶಾಸಕರೊಂದಿಗೆ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬಡಾವಣೆಯ ಮನೆ ನಂ.೧೮೬ನ್ನು ನಿರ್ವಹಣಾ ಕಚೇರಿಯನ್ನಾಗಿ ಮಾಡಲಾಗಿದೆ. ಕೇಂದ್ರದ ಸಿಬ್ಬಂದಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಮಾಡಲಿದ್ದಾರೆ. ಕೇಂದ್ರದ ಉಸ್ತುವಾರಿಯಲ್ಲಿದ್ದ ಅಭಿಯಂತರ ಎಂ.ರಾಜಣ್ಣ ಎಂಬವರನ್ನು ಕೆಲಸದಿಂದ ಬಿಡುಗಡೆ ಮಾಡಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡಲಾಗುವದು.

(ಮೊದಲ ಪುಟದಿಂದ) ಕಚೇರಿಯ ಸಮಯದಲ್ಲಿ ಫಲಾನುಭವಿಗಳು ಖುದ್ದಾಗಿ ದೂರುಗಳನ್ನು ಸಲ್ಲಿಸಬಹುದಾಗಿದ್ದು, ಸಮಸ್ಯೆಗಳನ್ನು ನಾಲ್ಕು ದಿನಗಳಲ್ಲಿ ಸರಿಪಡಿಸಿಕೊಡಲಾಗುವದು. ಕೇಂದ್ರದ ಸಿಬ್ಬಂದಿಯೊAದಿಗೆ ಸ್ಥಳೀಯ ಮೂರು ಮಂದಿ ಫಲಾನುಭವಿಗಳನ್ನು ಸೇರಿಸಿ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿ ಕಾಮಗಾರಿಯ ಗುಣಮಟ್ಟವನ್ನು ದೃಢೀಕರಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮನೆ ಉತ್ತಮ ಸ್ಥಿತಿಯಲ್ಲಿದೆ..!

ಅಧಿಕಾರಿಗಳು ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ಬಡಾವಣೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ೨೦೨೦ರಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸ ಲಾಗಿದೆ. ಪಲಾನುಭವಿಗಳು ಖುದ್ದಾಗಿ ಪರಿಶೀಲಿಸಿ ಮನೆಯು ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದು ದೃಢೀಕರಿಸಿ ಕೀಲಿಯನ್ನು ಸ್ವೀಕರಿಸಿದ್ದಾರೆ. ಬಡಾವಣೆಯ ಮನೆ ನಂ. ೬೨ನ್ನು ನಿರ್ವಹಣಾ ಕಚೇರಿ ಯನ್ನಾಗಿ ಮಾಡಿ ಸಿಬ್ಬಂದಿಗಳು ಹಾಗೂ ಇಂಜಿನಿಯರ್‌ಗಳನ್ನು ನೇಮಿಸಲಾಗಿತ್ತು. ಫಲಾನುಭವಿಗಳ ದೂರು ಬಂದಾಗ ಸಮಸ್ಯೆಯನ್ನು ಸರಿಪಡಿಸಲಾಗುತ್ತಿತ್ತು. ನಂತರ ದೂರುಗಳು ಬಾರದೇ ಇದ್ದುದರಿಂದ ನವೆಂಬರ್ ೨೦೨೧ರಂದು ಕಚೇರಿ ಯನ್ನು ಮುಚ್ಚಲಾಗಿದೆ ಎಂದು ತಿಳಿಸಲಾಗಿದೆ.

ವಿಸ್ತರಣೆಯಿಂದ ಟೈಲ್ಸ್ ಕಿತ್ತು ಹೋಗಿದೆ..!

ಮನೆಗಳನ್ನು ನೀಡಿದ ಬಳಿಕ ಪಲಾನುಭವಿಗಳು ಮನೆಗಳನ್ನು ಪಡೆದುಕೊಂಡ ನಂತರ ಹಲವಾರು ಮಂದಿ ಮನೆಗಳ ಬದಲಾವಣೆ ಮತ್ತು ವಿಸ್ತರಣೆ ಮಾಡಿ ಕೊಂಡಿರುತ್ತಾರೆ. ಆ ಸಮಯದಲ್ಲಿ ನೆಲಕ್ಕೆ ಅಳವಡಿಸಲಾದ ಟೈಲ್ಸ್ಗಳು ಹಾನಿಯಾಗಿರುತ್ತವೆ. ಅಲ್ಲದೆ, ಸಿಮೆಂಟ್ ಮತ್ತು ಇತರ ವಿಲೇವಾರಿ ವಸ್ತುಗಳು ಚರಂಡಿಗೆ ಸೇರಿ ಒಳ ಚರಂಡಿ ಮಾರ್ಗದಲ್ಲಿ ತಡೆ ಯುಂಟಾಗಿರುತ್ತದೆ ಎಂದು ಹೇಳಲಾಗಿದೆ.

ಚರಂಡಿಗೆ ೨.೪೧ ಕೋಟಿ..!

ಬಡಾವಣೆಯ ೭ ಮತ್ತು ೮ನೇ ಅಡ್ಡ ರಸ್ತೆಯಲ್ಲಿ ಮೋರಿಯಲ್ಲಿ ಮಣ್ಣು ಶೇಖರಣೆಯಾಗಿದ್ದು, ನೀರು ನಿಧಾನವಾಗಿ ಹರಿಯುತ್ತಿದೆ. ಶೀಘ್ರವೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವದು. ೨ನೇ ಅಡ್ಡ ರಸ್ತೆಯ ಮಳೆನೀರು ಚರಂಡಿಯ ಮೂಲಕ ಹೊರ ಹೋಗಲು ಪಶ್ಚಿಮ ಮತ್ತು ದಕ್ಷಿಣ ಭಾಗದ ಚರಂಡಿ ಯನ್ನು ನಿರ್ಮಿಸುವ ಕಾಮಗಾರಿ ಯನ್ನು ನಿರ್ವಹಿಸ ಬೇಕಾಗಿರುತ್ತದೆ. ದಕ್ಷಿಣ ಭಾಗದ ಚರಂಡಿಯನ್ನು ನಿರ್ಮಿಸಲು ಇನ್‌ಫೋಸಿಸ್ ಸಂಸ್ಥೆಯ ಮೂಲಭೂತ ಸೌಕರ್ಯ ಕಾಮಗಾರಿಯ ಅಂದಾಜು ಪಟ್ಟಿಯಲ್ಲಿ ಸೇರಿಸಿದ್ದು, ಕಾಮಗಾರಿಗೆ ಅನುಮೋದನೆ ದೊರೆತ್ತಿದ್ದು, ಕಾಮಗಾರಿ ಕೈಗೊಳ್ಳಲಾಗುವದು. ಪಶ್ಚಿಮ ಭಾಗದ ಚರಂಡಿಯನ್ನು ನಿರ್ಮಿಸಲು ಹೆಚ್ಚುವರಿ ಕಾಮಗಾರಿಯನ್ನು ನಿರ್ವಹಿಸಲು ರೂ. ೨೪೧ ಲಕ್ಷಗಳ ಅಂದಾಜು ಪಟ್ಟಿಯಲ್ಲಿ ಕಾಮಗಾರಿಯನ್ನು ಅಳವಡಿಸಲಾಗಿದ್ದು, ಅನುಮೋದನೆ ನೀಡಬೇಕಾಗಿರುತ್ತದೆ. ಅನುಮೋದನೆ ದೊರೆತ ನಂತರ ಕಾಮಗಾರಿ ಪೂರ್ಣಗೊಳಿಸಲಾಗುವದೆಂದು ತಿಳಿಸಲಾಗಿದೆ.

೩೦ ಮೀ.ರಸ್ತೆ ಮಾಡಿಲ್ಲ..!

ಇನ್‌ಫೋಸಿಸ್ ಸಂಸ್ಥೆಯ ಮನೆಗಳ ಕಾಮಗಾರಿಗೆ ಕ್ರೇನ್ಸ್ ಮತ್ತು ಯಂತ್ರೋಪಕರಣಗಳನ್ನು ಮುಖ್ಯ ರಸ್ತೆಯಲ್ಲಿಯೇ ಶೇಖರಿಸು ತ್ತಿರುವದರಿಂದ ಮುಖ್ಯ ರಸ್ತೆಯ ಕೊನೆಯ ೩೦ ಮೀ. ರಸ್ತೆಗೆ ಡಾಂಬರೀಕರಣ ಮಾಡಿರುವದಿಲ್ಲ. ಇನ್‌ಫೋಸಿಸ್ ಸಂಸ್ಥೆಯ ಮನೆಗಳ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿದ್ದು, ೬೦ ದಿನಗಳ ಒಳಗಡೆ ರಸ್ತೆಗೆ ಡಾಂಬರ್ ಹಾಕಲಾಗುವದು ಎಂದು ವರದಿ ಸಲ್ಲಿಸಲಾಗಿದೆ. ಉಳಿದೆಲ್ಲ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿದ್ದು, ಕೊನೆಯ ರಸ್ತೆಗೆ ಮಾತ್ರ ಡಾಂಬರ್ ಹಾಕಲಾಗುತ್ತಿದೆ..!

ರೇಲಿಂಗ್ಸ್ಗೆ ಅನುಮೋದನೆ ಬೇಕಿದೆ..!

ಬಡಾವಣೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮೂರು ರಸ್ತೆಗಳ ತಡೆಗೋಡೆಗಳ ಮೇಲೆ ರಕ್ಷಣಾ ಬೇಲಿ(ರೇಲಿಂಗ್ಸ್) ಅಳವಡಿಸುವ ಕಾಮಗಾರಿಯನ್ನು ನಿರ್ವಹಿಸಲು ಹೆಚ್ಚುವರಿ ಕಾಮಗಾರಿ ಯನ್ನು ನಿರ್ವಹಿಸುವ ರೂ.೨೪೧ ಲಕ್ಷಗಳ ಅಂದಾಜು ಪಟ್ಟಿಯಲ್ಲಿ ಕಾಮಗಾರಿಯನ್ನು ಅಳವಡಿಸ ಲಾಗಿದ್ದು, ಕಾಮಗಾರಿಗೆ ಅನುಮೋದನೆ ದೊರೆತ ಬಳಿಕ ನಿರ್ವಹಿಸಲಾಗುವದು ಎಂದು ತಿಳಿಸಲಾಗಿದೆ.

ಗಿಡ-ಬಳ್ಳಿಗಳಿಂದ ‘ಬ್ಲಾಕ್..’!

ಬಡಾವಣೆಗೆ ಸಿಡಿಡಿ ಸಂಸ್ಥೆಯಿAದ ೧೫೨ ಕೆಎಲ್‌ಡಿ/ದಿನಕ್ಕೆ ಸಾಮರ್ಥ್ಯದ ಶೌಚ ಗುಂಡಿಯನ್ನು ಅಳವಡಿಸಲಾಗಿದೆ. ಇದರ ಕಾರ್ಯವೈಖರಿ ಹಾಗೂ ತರಬೇತಿಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನೀಡಲಾಗಿರುತ್ತದೆ. ಈ ಗುಂಡಿಯ ಸುತ್ತಲೂ ಸರಿಯಾದ ನಿರ್ವಹಣೆ ಇಲ್ಲದೆ ಗಿಡ, ಬಳ್ಳಿಗಳು ಬೆಳೆದು ಶುದ್ಧೀಕರಿಸಿದ ನೀರು ಹೊರಗೆ ಹೋಗಲು ಸಾಧ್ಯವಾಗದೆ ನೀರು ನಿಂತು ಬ್ಲಾಕೇಜ್ ಆಗಿರುತ್ತದೆ. ಹತ್ತು ದಿನಗಳಲ್ಲಿ ಗಿಡ, ಬಳ್ಳಿಗಳನ್ನು ಸ್ವಚ್ಛಗೊಳಿಸ ಲಾಗುವದೆಂದು ಹೇಳಲಾಗಿದೆ.

ವಾಸವಿಲ್ಲದೆ ಕಾಡು ಬೆಳೆದಿದೆ..!

ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಒಟ್ಟು ೩೮೩ ಮನೆಗಳ ಪೈಕಿ ೬ ಮನೆಗಳಿಗೆ ಫಲಾನುಭವಿಗಳು ಆಯ್ಕೆಯಾಗದ ಕಾರಣ ೩೭೭ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸ ಲಾಗಿದೆ. ಕೆಲವು ಮನೆಗಳಲ್ಲಿ ಫಲಾನುಭವಿಗಳು ವಾಸವಿಲ್ಲದೆ ಮನೆ ಸುತ್ತಲೂ ಗಿಡ, ಬಳ್ಳಿಗಳು ಬೆಳೆದಿದೆ. ಮೋಟಾರು ನಿರ್ವಹಣೆ ಹಾಗೂ ನೀರು ಸರಬರಾಜು ಕಾರ್ಯವನ್ನು ಆಗಸ್ಟ್ ೨೦೨೦ರಲ್ಲಿ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಕಸ ವಿಲೇವಾರಿ ಕಾಮಗಾರಿಯು ಅಂದಾಜು ಪಟ್ಟಿಯಲ್ಲಿ ಅಡಕ ವಾಗಿರುವದಿಲ್ಲವೆಂದು ವರದಿ ಯಲ್ಲಿ ಉಲ್ಲೇಖಿಸಲಾಗಿದೆ.