ನಾಪೋಕ್ಲು, ಜ. ೨೪: ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ಹಾಜರಿರಬೇಕಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು, ಈ ಬಗ್ಗೆ ಅವರಿಗೆ ನೋಟೀಸ್ ನೀಡಿ ಕ್ರಮಕೈಗೊಳ್ಳವಂತೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಕೊರೊನಾ ರೋಗವು ಹೆಚ್ಚಾಗುತ್ತಿದ್ದು ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿ ಅಗತ್ಯ ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಪ್ಪಿದರೆ ದಂಡ ವಿಧಿಸುವಂತೆಯೂ ಮತ್ತು ಸಂತೆಗೆ ಬರುವವರು ತಮ್ಮ ಕುಟುಂಬದವರೊAದಿಗೆ ಬಾರದೇ ಒಂದು ಕುಟುಂಬದ ಒಬ್ಬ ಸದಸ್ಯರು ಬರುವಂತೆ ಎರಡು ದಿನ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಪ್ರತಿಯೊಬ್ಬರಿಗೂ ತಿಳಿಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಕಂದಾಯ ಪರಿವೀಕ್ಷಕ ರವಿಯವರು ಸಂತೆಗೆ ಜೀಪಿನಲ್ಲಿ ಕಾರ್ಮಿಕರನ್ನು ಕರೆದುಕೊಂಡು ಬರುವವರು ಮಾಸ್ಕ್ ಧರಿಸಿದ್ದಾರ ಎಂದು ಪರಿಶೀಲಿಸಬೇಕು. ಇದರ ಬಗ್ಗೆ ಮಾಲೀಕರಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಬೇಕೆಂದು ಸಲಹೆ ನೀಡಿದರು. ಈಗಾಗಲೇ ಕೊರೊನಾ ಕಾಣಿಸಿ ಕೊಂಡಿರುವ ಶಾಲಾ ಮಕ್ಕಳಿಗೆ ಯಾವುದೇ ಔಷಧಿಗಳನ್ನು ನೀಡಿಲ್ಲ. ಇವರ ಮುಂದಿನ ನಡೆ ಏನು ಎಂದಾಗ ಅಂಗನವಾಡಿ ಕಾರ್ಯಕರ್ತೆಯರು ಇದಕ್ಕೆ ಸನಜಾಯಿಷಿಕೆ ನೀಡಿ ಮಕ್ಕಳ ಸರಿಯಾದ ವಿಳಾಸ ತಿಳಿದಿಲ್ಲ. ಆದುದರಿಂದ ಅವರಿಗೆ ಬೇಕಾದ ಔಷಧಿ ಸೌಲಭ್ಯವನ್ನು ಒದಗಿಸಲಾಗಲಿಲ್ಲ ಎಂದರು.
ಸೋಮವಾರ ಸಂತೆ ದಿನ ಮಾರುಕಟ್ಟೆ ಮತ್ತಿತರ ಕಡೆಗಳಲ್ಲಿ ಮಾಸ್ಕ್ ಧರಿಸದವರ ಬಗ್ಗೆ ಕ್ರಮಕೈಗೊಳ್ಳುವ ಸಂದರ್ಭ ಓರ್ವ ಪೊಲೀಸ್ರನ್ನು ಕಳುಹಿಸುವಂತೆ ಪಿ.ಡಿ.ಓ. ಕೋರಿದರು. ಅಲ್ಲದೆ ನಗರದ ಆಯಕಟ್ಟಿನ ಜಾಗದಲ್ಲಿ ಪೋಲಿಸರನ್ನು ನಿಯೋಜಿಸುವಂತೆ ಅವರು ಕೇಳಿಕೊಂಡರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಮ್ಮದ್ ಕುರೇಶಿಯವರ ಅಧ್ಯಕ್ಷತೆಯಲ್ಲಿ ನಡೆಸಲಾದ ಸಭೆಯಲ್ಲಿ ಪಿ.ಡಿ.ಓ ಬಲ್ಲಂಡ ಚೊಂದಕ್ಕಿ, ನೊಡಲ್ ಅಧಿಕಾರಿ ಬಿ.ಸಿ.ಎಂ. ಇಲಾಖೆಯ ರಾಜಶೇಖರ್, ಎ.ಎಸ್.ಐ. ಗೋಪಾಲ ಕೃಷ್ಣ, ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.