ಮುಳ್ಳೂರು, ಜ. ೨೪: ಸಮೀಪದ ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಕೂಜಿಗೇರಿ, ಕಾಜೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಕಾಡಾನೆ ಹಿಂಡು ಗ್ರಾಮಗಳಲ್ಲಿ ಸಂಚರಿಸಿ ಕಾಫಿ, ಬಾಳೆ, ತೆಂಗಿನ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.

ರೈತರು ಫಸಲು ನಷ್ಟವಾಗುತ್ತಿರುವುದರಿಂದ ಕಂಗಾಲಾಗಿದ್ದಾರೆ. ಪಕ್ಕದ ಯಸಳೂರು ಮೀಸಲು ಅರಣ್ಯದಿಂದ ಬರುವ ಕಾಡಾನೆಗಳ ಹಿಂಡು ದುಂಡಳ್ಳಿ, ಕೂಜಿಗೇರಿ, ಕಾಜೂರು ಇನ್ನು ಮುಂತಾದ ಗ್ರಾಮಗಳಲ್ಲಿ ವಾರಗಟ್ಟಲೆ ಬೀಡುಬಿಡುತ್ತಿದ್ದು, ರಾತ್ರಿ ವೇಳೆಯಲ್ಲಿ ರೈತರ ತೋಟ, ಹೊಲ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶನಿವಾರ ರಾತ್ರಿ ಕಾಡಾನೆ ಹಿಂಡು ಕೂಜಿಗೇರಿ ಗ್ರಾಮದ ರೈತರಾದ ಕೆ.ಎಂ.ನಾಗರಾಜು, ಕೆ.ಟಿ.ಈರಪ್ಪ, ಜಯಪ್ಪ, ನಾಗೇಶ್, ರಘು ಅವರುಗಳ ಕಾಫಿ, ತೆಂಗು, ಬಾಳೆ ತೋಟಕ್ಕೆ ದಾಳಿ ಇಟ್ಟು ಬಂದಿದ್ದ ಬಾಳೆಗಿಡಗಳನ್ನು ತುಳಿದು ಧ್ವಂಸಗೊಳಿಸಿದ್ದು, ತೆಂಗಿನ ಮರಗಳನ್ನು ಮುರಿದು ಬೀಳಿಸಿದ್ದು ಕಾಫಿ ಗಿಡಗಳನ್ನು ತುಳಿದು ಹಾಕಿದಲ್ಲದೆ ತೋಟದಲ್ಲಿ ನೀರಾವರಿಗಾಗಿ ಅಳವಡಿಸಿದ ಪೈಪ್‌ಗಳನ್ನು ಹಾನಿ ಪಡಿಸಿವೆ. ಅಪಾರ ಪ್ರಮಾಣದಲ್ಲಿ ಫಸಲು ನಷ್ಟಗೊಂಡಿರುವುದಾಗಿ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.