ಮಡಿಕೇರಿ, ಜ. ೨೪ : ಪ್ರಾಚೀನ ಇತಿಹಾಸ ಹೊಂದಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದಿನ ಕಾಲಘಟ್ಟದಲ್ಲಿ ಜನರ ಆರೋಗ್ಯ ಸಂರಕ್ಷಣೆಗೆ ಪ್ರಮುಖವಾಗಿದ್ದು ಈ ಚಿಕಿತ್ಸಾ ಪದ್ಧತಿಯನ್ನು ಸೂಕ್ತ ರೀತಿಯಲ್ಲಿ ಜನರ ಉಪಯೋಗಕ್ಕೆ ದೊರಕವಂತೆ ಮಾಡುವ ಅಗತ್ಯವಿದೆ ಎಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೊರವಲಯದಲ್ಲಿನ ಇಬ್ಬನಿ ಕೂರ್ಗ್ ರೆಸಾರ್ಟ್ನಲ್ಲಿ ಆರೋಗ್ಯ ಹೆಸರಿನ ಆಯುರ್ವೇದ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ನಾಣಯ್ಯ, ೪ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ಕೆಲವೆಡೆ ಮೋಸಗಾರರಿಂದ ತನ್ನ ಹೆಸರು ಕೆಡಿಸಿಕೊಳ್ಳುತ್ತಿದೆ. ಕೊಡಗಿನಲ್ಲಿ ಅಣಬೆಯಂತೆ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಸಂಬಾರ ಪದಾರ್ಥ ಮಾರಾಟದ ಮಳಿಗೆಗಳು ತಲೆ ಎತ್ತುತ್ತಿವೆ. ಇದರಿಂದಾಗಿ ನೈಜವಾಗಿ ಆಯುರ್ವೇದ ಚಿಕಿತ್ಸೆ ಮತ್ತು ಸಾಂಬಾರ ಪದಾರ್ಥ ಮಾರಾಟ ಮಾಡುವವರಿಗೆ ಧಕ್ಕೆ ಉಂಟಾಗಿದೆ ಎಂದು ವಿಷಾಧಿಸಿದರು.

ಹಿರಿಯ ವಕೀಲ ಎಂ.ಎ. ನಿರಂಜನ್ ಮಾತನಾಡಿ, ನಿಸರ್ಗವನ್ನು ಹಾಗೇ ಉಳಿಸಿಕೊಂಡು ಜೀವ ವೈವಿಧ್ಯತೆಗಳನ್ನೂ ಸುತ್ತಲಿನಲ್ಲಿ ಹೊಂದಿ ಅಪರೂಪದ ವಾತಾವರಣವನ್ನು ಇಬ್ಬನಿ ಕೂರ್ಗ್ ಕಲ್ಪಿಸಿದೆ. ಇಂಥ ವಿನೂತನ ಪರಿಕಲ್ಪನೆಗೆ ಕೊಡಗನ್ನು ಆಯ್ಕೆ ಮಾಡಿಕೊಂಡ ಕ್ಯಾಪ್ಟನ್ ಸೆಬಾಸ್ಟಿನ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಆರೋಗ್ಯ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ರೆಜಿತನ್ ಮಾತನಾಡಿ, ೪ ವೇದಗಳ ನಂತರ ಆಯರ್ವೇದ ೫ನೇ ವೇದವಾಗಿ ಪರಿಗಣಿಸಲ್ಪಟ್ಟಿದೆ. ಇದು ಆರೋಗ್ಯ ಚಿಕಿತ್ಸಾ ಪದ್ಧತಿಯ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಮಾಹಿತಿ ನೀಡಿದರಲ್ಲದೆ ಆಯುರ್ವೇದದ ಉಪಯೋಗ ಅರಿತುಕೊಂಡೇ ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟ ಕಾಲದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಪ್ರಾಧಾನ್ಯತೆ ನೀಡಿತು ಎಂದು ಹೇಳಿದರು. ಕೋವಿಡ್ ಸೋಂಕಿನಿAದ ಚೇತರಿಸಿಕೊಂಡ ಬಳಿಕ ಕಂಡುಬರುವ ಅನೇಕ ಅಡ್ಡಪರಿಣಾಮಗಳಿಗೂ ಆಯುರ್ವೇದ ಪದ್ಧತಿಯಲ್ಲಿ ಸೂಕ್ತ ಔಷಧಿಗಳು ಲಭ್ಯವಿದೆ ಎಂದೂ ಅವರು ತಿಳಿಸಿದರು.

ಇಬ್ಬನಿ ಕೂರ್ಗ್ ರೆಸಾರ್ಟ್ ಮಾಲೀಕ ಕ್ಯಾಪ್ಟನ್ ಸೆಬಾಸ್ಟಿನ್ ಮಾತನಾಡಿ, ಉದ್ಯಮಕ್ಕಿಂತ ಹೆಚ್ಚಾಗಿ ಜನರಿಗೆ ಪ್ರಕೃತ್ತಿ ಮಡಿಲಿನಲ್ಲಿ ಯಾವುದೇ ರೀತಿಯಲ್ಲಿಯೂ ಗಿಡಮರ, ಜೀವಸಂಕುಲಗಳಿಗೆ ಹಾನಿಯಾಗದಂತೆ ನೀಡಬೇಕೆಂಬ ತನ್ನ ಉದ್ದೇಶ ಈಡೇರಿದೆ ಎಂದು ಹೇಳಿದರು. ಇಬ್ಬನಿ ಕೂರ್ಗ್ ವ್ಯವಸ್ಥಾಪಕ ನಿರ್ದೇಶಕಿ ಶೆರ್ರಿ, ಪ್ರಮುಖರಾದ ವಿವೇಕ್, ಭಾವನ ವೇದಿಕೆಯಲ್ಲಿದ್ದರು.