ಸೋಮವಾರಪೇಟೆ, ಜ.೨೩ : ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಗ್ರಾಮಸ್ಥರು ಆತಂಕದಿAದ ದಿನದೂಡುವಂತಾಗಿದೆ. ಇದರೊಂದಿಗೆ ಕೃಷಿ ಪ್ರದೇಶಕ್ಕೂ ಆನೆಗಳು ಲಗ್ಗೆಯಿಡುತ್ತಿದ್ದು, ಫಸಲು ನಷ್ಟ ಅನುಭವಿಸುವಂತಾಗಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

ಗ್ರಾಮ ವ್ಯಾಪ್ತಿಯಲ್ಲಿ ಮರಿಯಾನೆ ಸೇರಿದಂತೆ ಒಟ್ಟು ೬ ಆನೆಗಳ ಹಿಂಡು ಸಂಚರಿಸುತ್ತಿದ್ದು, ಕಾಫಿ ತೋಟದೊಳಗೆ ದಾಂಧಲೆ ನಡೆಸುತ್ತಿವೆ. ತೋಟದಲ್ಲಿರುವ ಕಾಫಿ ಗಿಡಗಳು, ಕಾಫಿ ಫಸಲು, ಬಾಳೆ ಸೇರಿದಂತೆ ಇನ್ನಿತರ ಕೃಷಿಯನ್ನು ನಾಶಪಡಿಸುತ್ತಿವೆ.

ನಿನ್ನೆ ರಾತ್ರಿ ಕಟ್ಟೆಪುರದ ಸಂತೋಷ್ ಹಾಗೂ ನಾಗರಾಜ್ ಅವರಿಗೆ ಸೇರಿದ ತೋಟಕ್ಕೆ ದಾಳಿ ಇಟ್ಟಿರುವ ಕಾಡಾನೆಗಳು, ಬಾಳೆ, ಅಡಿಕೆ, ಕಾಫಿ ಗಿಡಗಳು ಸೇರಿದಂತೆ ಅಲ್ಯೂಮಿನಿಯಂನ ಸ್ಪಿçಂಕ್ಲರ್ ಪೈಪ್‌ಗಳನ್ನು ತುಳಿದು ನಷ್ಟಪಡಿಸಿವೆ.

ಕಳೆದ ಒಂದು ವಾರದಿಂದ ಕಟ್ಟೆಪುರ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಆಗಳಿ ಅರಣ್ಯ, ನಿಲುವಾಗಿಲು, ಕಟ್ಟೆಪುರ, ಕೋಣನಹಳ್ಳಿ, ಮಾದ್ರೆ ಹೊಸಳ್ಳಿ, ಬಸವನಾರೆ, ನೀರುಗುಂದ, ಉಂಬಳಿ ಬೆಟ್ಟ ವ್ಯಾಪ್ತಿಯ ಸಾರ್ವಜನಿಕರು ಜೀವಭಯದಿಂದ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಆಲೂರು ಹಾಗೂ ಯಸಳೂರು ವ್ಯಾಪ್ತಿಯಿಂದ ಆಗಮಿಸಿರುವ ಕಾಡಾನೆಗಳ ಹಿಂಡು, ಕಳೆದ ಒಂದು ವಾರದಿಂದ ಈ ವ್ಯಾಪ್ತಿಯಲ್ಲೇ ಬೀಡುಬಿಟ್ಟಿವೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಇಲಾಖೆಗೆ ಮನವಿ ಮಾಡಿದ್ದರೂ ಈವರೆಗೆ ಕ್ರಮವಹಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕಾಡಾನೆಗಳು ಅರಣ್ಯದಿಂದ ರಸ್ತೆಗೆ ಬರುವ ಸ್ಥಳಗಳಲ್ಲಿ ಅರಣ್ಯ ಇಲಾಖೆಯಿಂದ ಸಮರ್ಪಕವಾಗಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಸೋಲಾರ್ ಬೇಲಿ ಹಾಗೂ ಕಂದಕಗಳನ್ನು ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ಆಗಬೇಕೆಂದು ಒತ್ತಾಯಿಸಿದ್ದಾರೆ.