ಕಣಿವೆ, ಜ. ೨೩: ತಮ್ಮ ಮನೆಯಂಗಳದಲ್ಲಿ ಬೆಳೆದ ಶ್ರೀಗಂಧ ವನ್ನು ಕಟಾವು ಮಾಡಿ ಮೈಸೂರಿನ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿಗೆ ಸಾಗಿಸಿ ವರ್ಷಗಳು ಕಳೆದರೂ ಕೂಡ ಕೃಷಿಕನಿಗೆ ಹಣ ಪಾವತಿ ಮಾಡದೇ ಸತಾಯಿಸುತ್ತಿದ್ದ ಬಗ್ಗೆ ‘ಶಕ್ತಿ’ ವರದಿಯನ್ನು ಪ್ರಕಟಿಸಿದ ಬಳಿಕ ಎಚ್ಚೆತ್ತ ಕೊಡಗು ಜಿಲ್ಲಾಡಳಿತ ಶ್ರೀಗಂಧದ ಕೃಷಿಕನಿಗೆ ನೀಡಬೇಕಿದ್ದ ಹಣವನ್ನು ಪಾವತಿಸಿದೆ.
ಸತತವಾಗಿ ಮೂರುವರೆ ದಶಕಗಳ ಹಿಂದೆ ತಮ್ಮ ಮನೆಯಂಗಳದಲ್ಲಿ ನೆಟ್ಟ ಶ್ರೀಗಂಧದ ಗಿಡವನ್ನು ೩೪ ವರ್ಷಗಳ ಕಾಲ ಜೋಪಾನ ಮಾಡಿ ೨೦೧೭ ರಂದು ಅರಣ್ಯ ಇಲಾಖೆಯ ನಿಯಮಗಳ ಅನ್ವಯ ಶ್ರೀಗಂಧದ ಮರವನ್ನು ಜೆಸಿಬಿ ಯಂತ್ರದ ಮೂಲಕ ಬೇರು ಸಹಿತ ಕಟಾವು ಮಾಡಲಾಗಿತ್ತು.
ನಂತರ ಕಟಾವು ಮಾಡಿದ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧವನ್ನು ಕುಶಾಲನಗರದ ಶ್ರೀಗಂಧದ ಕೋಠಿಯಲ್ಲಿ ಇಡಲಾಗಿತ್ತು. ಅದೇ ವರ್ಷ ಕಾವೇರಿ ನದಿಯ ಪ್ರವಾಹ ಉಕ್ಕಿ ಹರಿದು ಗಂಧದ ಕೋಠಿ ಮುಳುಗಿತ್ತು. ನಂತರ ನೆರೆ ಇಳಿದೊಡನೆ ಶ್ರೀಗಂಧವನ್ನು ಮೈಸೂರಿನ ಶ್ರೀಗಂಧದ ಕೋಠಿಗೆ ಸಾಗಿಸಲಾಗಿತ್ತು. ಹೀಗೆ ಶ್ರೀಗಂಧವನ್ನು ಸಾಗಿಸಿ ವರ್ಷಗಳು ಕಳೆದರೂ ಕೂಡ ಅಲ್ಲಿನ ಅಧಿಕಾರಿಗಳು ಸರ್ಕಾರದಿಂದ ಹಣ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಕೃಷಿಕ ಪಳಂಗಪ್ಪ ‘ಶಕ್ತಿ’ಯೊಂದಿಗೆ ದೂರಿದ್ದರು.
ನಂತರ ‘ಶಕ್ತಿ’ ಅರಣ್ಯ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಯ ಕುರಿತು ವರದಿ ಮಾಡಿದ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತದ ಪ್ರಯತ್ನ ದಿಂದಾಗಿ ಕೃಷಿಕನಿಗೆ ಪಾವತಿಸಬೇಕಿದ್ದ ೫ ಲಕ್ಷಕ್ಕೂ ಹೆಚ್ಚಿನ ಹಣ ಪಾವತಿ ಯಾಗಿದೆ.
ವರದಿ: ಕೆ.ಎಸ್. ಮೂರ್ತಿ