ಶ್ರೀಮಂಗಲ, ಜ. ೨೨: ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ದೌರ್ಜನ್ಯ ಕಾಯಿದೆ ವ್ಯಾಪಕವಾಗಿ ದುರಪಯೋಗವಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅಮಾಯಕರ ಮೇಲೆ ಹೂಡಲಾಗುತ್ತಿರುವ ಮೊಕದ್ದಮೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಒತ್ತಾಯಿಸಿದರು.

ಶ್ರೀಮಂಗಲದಲ್ಲಿ ನಡೆದ ಸಮಿತಿಯ ಆಡಳಿತ ಮಂಡಳಿ ಸಭೆಯಲ್ಲಿ ಕೆಲವು ಸಂಘಟನೆಗಳು ಮೊಕದ್ದಮೆ ಹೂಡಲು ಕುಮ್ಮಕ್ಕು ನೀಡುತ್ತಿದ್ದು, ನಂತರ ಹಣಪಡೆದು ರಾಜಿಮಾಡಿಕೊಳ್ಳುತ್ತಿವೆ. ಇದೊಂದು ದಂಧೆಯಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಈ ದಂಧೆಯ ಹಿಂದಿರುವ ಮಧ್ಯವರ್ತಿಗಳನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವ ಕ್ರಮಕೈಗೊಳ್ಳಬೇಕು. ಇಂತವರಿAದ ಜಿಲ್ಲೆಯ ಸಾಮರಸ್ಯಕ್ಕೆ ದಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.

ಬಾಳೆಲೆಯಲ್ಲಿ ಹಿರಿಯ ನಾಗರಿಕ ಪೋಡಮಾಡ ಉತ್ತಪ್ಪ ಒಂದು ವರ್ಷದ ಹಿಂದೆ ಮರಣಪಟ್ಟಿದ್ದು ಅವರೂ ಸೇರಿದಂತೆ ಮಚ್ಚಮಾಡ ಮಾಚಯ್ಯ, ಹುದಿಕೇರಿಯ ನೂರೇರ ಮನೋಜ್, ಮನೋಹರ್, ಹೈಸೊಡ್ಲೂರುವಿನ ಬಯವಂಡ ಮಹಾಬಲ ಮತ್ತು ಇತರರ ಮೇಲೆ ಸುಳ್ಳು ಮೊಕ್ಕದ್ದಮೆ ಹೂಡಿ ಕಿರುಕುಳ ನೀಡಲಾಗುತ್ತಿದೆ ಎಂದು ಕಟ್ಟಿ ಮಂದಯ್ಯ ಕಿಡಿಕಾರಿದರು.

ಸಮಿತಿಯ ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ ಅವರು ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ದಾಳಿ ನಡೆಸಿದ ನಂತರ ಹುಲಿ ಸೆರೆಗೆ ಅನುಮತಿಗಾಗಿ ಪ್ರಯತ್ನಿಸುವ ಬದಲು ಮುಂಚಿತವಾಗಿಯೇ ಅರಣ್ಯ ಇಲಾಖೆ ಅನುಮತಿ ಇಟ್ಟುಕೊಂಡರೆ ತಕ್ಷಣ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯುವ ಮೂಲಕ ಹೆಚ್ಚಿನ ಜಾನುವಾರುಗಳ ಮೇಲೆ ದಾಳಿ ಮತ್ತು ಜನರಲ್ಲಿ ಆತಂಕ ದೂರ ಮಾಡಬಹುದೆಂದರು. ಹುಲಿ ದಾಳಿಯಿಂದ ಜಾನುವಾರು ಕಳೆದುಕೊಂಡ ವಾರಸುದಾರರಿಗೆ ಕೂಡಲೇ ಪರಿಹಾರ ನೀಡಬೇಕೆಂದರು.

ಸಮಿತಿಯ ಸಲಹೆಗಾರ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್ ಮಾತನಾಡಿ, ದಕ್ಷಿಣ ಕೊಡಗಿನ ತೋಟದ ಒಂಟಿ ಮನೆಗಳಲ್ಲಿ ಇರುವ ಹಿರಿಯ ನಾಗರಿಕರ ಮೇಲೆ ಮನೆಗೆ ನುಗ್ಗಿ ಹಲ್ಲೆ ಸುಲಿಗೆ ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿ ನೇಮಿಸಿ ಹೊಸಬರು ಮತ್ತು ಸಂಶಯಾತ್ಮಕ ವ್ಯಕ್ತಿಗಳ ಮೇಲೆ ನಿಗಾವಹಿಸಲು ಹಗಲು-ರಾತ್ರಿ ಬೀಟ್ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಕಾಫಿ, ಕಾಳುಮೆಣಸು ಮಾರಾಟ ಸಂದರ್ಭ ತೂಕದಲ್ಲಿ

ಬೆಳೆಗಾರರಿಗೆ ವಂಚನೆಯಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಲು ಕರೆ ನೀಡಿದರು.

ಸಭೆಯಲ್ಲಿ ಸಮಿತಿಯ ಸಹಕಾರ್ಯದರ್ಶಿ ಕೊಳೇರ ರಾಜ ನರೇಂದ್ರ, ಖಜಾಂಚಿ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಸದಸ್ಯರಾದ ಮಲ್ಲಂಗಡ ರಂಜು ಉತ್ತಪ್ಪ, ಮಾಣೀರ ವಿಜಯ್ ನಂಜಪ್ಪ, ಮುಕ್ಕಾಟೀರ ದಾದ ಹಾಜರಿದ್ದರು.