ಸೋಮವಾರಪೇಟೆ, ಜ. ೨೨: ಪ್ರತಿಯೊಬ್ಬರು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಒಳ್ಳೆಯ ಕಣ್ಣುಗಳು ನಿತ್ಯದ ಚಟುವಟಿಕೆಗಳಿಗೆ ಸಹಕಾರಿಯಾಗಲಿವೆ ಎಂದು ಸರ್ಕಾರದ ಸಾಂಸ್ಥಿಕ ಸಲಹೆಗಾರರು ಹಾಗೂ ಬೆಂಗಳೂರು ಎಸ್ಸಿಲಾರ್ ವಿಷನ್ ಫೌಂಡೇಶನ್‌ನ ಟ್ರಸ್ಟಿ ಕೆ.ವಿ. ಮಹೇಶ್ ಅಭಿಪ್ರಾಯಪಟ್ಟರು. ಇಲ್ಲಿನ ನಾವು ಪ್ರತಿಷ್ಠಾನದ ವತಿಯಿಂದ ಬೆಳಕು ಕಾರ್ಯಕ್ರಮದಡಿ ಎಸ್ಸಿಲಾರ್ ವಿಷನ್ ಫೌಂಡೇಶನ್ ಪ್ರಾಯೋಜಿಸಿದ್ದ ಕನ್ನಡಕಗಳನ್ನು, ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.

ದೇಶದ ಮಟ್ಟಿಗೆ ಕರ್ನಾಟಕದಲ್ಲಿ ಅತೀ ಹೆಚ್ಚು ನೇತ್ರದಾನಿಗಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನದಿಂದ ಪ್ರೇರಿತರಾದವರು ಅತೀಹೆಚ್ಚು ಮಂದಿ ದಾನ ಮಾಡಿದ್ದಾರೆ. ನೇತ್ರದಾನ ಪವಿತ್ರವಾದುದು ಎಂದು ಹೇಳಿದರು.

ನಾವು ಪ್ರತಿಷ್ಠಾನ ಸಂಸ್ಥಾಪಕ ಗೌತಮ್ ಕಿರಗಂದೂರು ಮಾತನಾಡಿ, ಕಳೆದ ನ. ೨೦ ರಂದು ಪ್ರತಿಷ್ಠಾನದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದವರಿಗೆ ಇಂದಿನ ಕಾರ್ಯಕ್ರಮದಲ್ಲಿ ಕನ್ನಡಕ ವಿತರಿಸಲಾಗಿದೆ ಎಂದರು.

ಪ್ರತಿಷ್ಠಾನದ ವತಿಯಿಂದ ಹಸಿರು ಕಲ್ಯಾಣ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಮದುವೆ ಕಾರ್ಯಕ್ರಮಗಳಲ್ಲಿ ಪರಿಸರಾಭಿವೃದ್ಧಿಯ ಧ್ಯೇಯದೊಂದಿಗೆ ಸಸಿಗಳನ್ನು ವಿತರಿಸುವ ಕಾರ್ಯ, ನೇತ್ರದಾನ, ಅಂಗಾAಗ ದಾನ, ದೇಹದಾನ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಮಾಹಿತಿಯಿತ್ತರು. ಕಾರ್ಯಕ್ರಮದಲ್ಲಿ ಹಾಸನದ ಐ-ದೃಷ್ಟಿ ಆಸ್ಪತ್ರೆಯ ಎಂ.ಎಲ್. ಮಹೇಶ್, ರೈತ ಮುಖಂಡರಾದ ಜಿ.ಎಂ. ಹೂವಯ್ಯ, ಶುಶ್ರೂಷಕಿ ಮೋನಿಕಾ ಉಪಸ್ಥಿತರಿದ್ದರು.