ಮಡಿಕೇರಿ, ಜ. ೨೨: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಗೆ ೨ ವರ್ಷದ ಅವಧಿಗೆ ನಾಮ ನಿರ್ದೇಶನದ ಸದಸ್ಯರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ನಾಮ ನಿರ್ದೇಶನ ಸದಸ್ಯತ್ವ ಬಯಸುವ ವ್ಯಕ್ತಿಯು ಕೊಡಗು ಜಿಲ್ಲೆಯವರಾಗಿದ್ದು, ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರ ಬೇಕು. ಜಿಲ್ಲೆಯಲ್ಲಿ ಕನಿಷ್ಟ ೧೫ ವರ್ಷ ವಾಸವಾಗಿರಬೇಕು. ಕನಿಷ್ಟ ೩೫ ವರ್ಷದಿಂದ ಗರಿಷ್ಟ ೬೫ ವರ್ಷ ವಯೋಮಿತಿ ಒಳಗಿರಬೇಕು. ಕನಿಷ್ಟ ಎಸ್‌ಎಸ್‌ಎಲ್‌ಸಿ ವರೆಗೆ ವಿದ್ಯಾಭ್ಯಾಸ ಮಾಡಿರಬೇಕು. ಸಂಬAಧಿಸಿದ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ವಿಶ್ವಕರ್ಮ ಜನಾಂಗದವರು ವಾಸಿಸುವ ಸ್ಥಳ, ಕೈಗೊಳ್ಳುತ್ತಿರುವ ಉದ್ಯೋಗ ಮತ್ತಿತರ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು.
ಆಯ್ಕೆಯಾಗುವ ವ್ಯಕ್ತಿಯು ನಿಗಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪಂಚವೃತ್ತಿ ಯೋಜನೆಗಳ ಪರಂಪರಾಗತವಾಗಿ ಸ್ವಂತ ನಿರ್ವಹಿಸಿರುವ ಅನುಭವ ಹೊಂದಿರಬೇಕು. ಆಯ್ಕೆಯಾಗುವ ವ್ಯಕ್ತಿಯು ಯಾವುದೇ ಕ್ರಿಮಿನಲ್ ಮೊಕ್ಕದ್ದಮೆಗಳನ್ನು ಎದುರಿಸುತ್ತಿರಬಾರದು ಹಾಗೂ ದಂಡ, ಜುಲ್ಮಾನೆ, ಶಿಕ್ಷೆ ಅನುಭವಿಸಿರಬಾರದು. ಆಯ್ಕೆ ಸಮಿತಿಯು ಜಿಲ್ಲಾ ಮಟ್ಟದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯಾಗಿದ್ದು ಅಂತಹ ಸಮಿತಿಗೆ ಸರಳ, ಸಜ್ಜನಿಕೆ ಹಾಗೂ ಇತರರೊಂದಿಗೆ ಗೌರವಾನ್ವಿತವಾಗಿ ವರ್ತಿಸುವಂತಹ ವಿವೇಕವುಳ್ಳ ಪ್ರಜ್ಞಾವಂತರಾಗಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ರಾಡ್ರಿಗಸ್ ಕಟ್ಟಡದ ಎದುರು, ರೇಸ್‌ಕೋರ್ಸ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು. ನಾಮ ನಿರ್ದೇಶಿತ ಸದಸ್ಯತ್ವ ಬಯಸುವವರು ಅಗತ್ಯ ದಾಖಲಾತಿಗಳೊಂದಿಗೆ ತಾ. ೨೫ ರೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.ಸಂ.೦೮೨೭೨-೨೨೧೬೫೬ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.