*ಗೋಣಿಕೊಪ್ಪ, ಜ. ೨೨: ಗ್ರಾಮಗಳಿಗೆ ಕೊರೊನಾ ಹರಡದಂತೆ ನಿಯಂತ್ರಿಸಲು ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡು ಕೊರೊನಾ ರೂಪಾಂತರಿ ಓಮಿಕ್ರಾನ್ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಶ್ರೀಕಂಠ ತಿಳಿಸಿದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಟಾಸ್ಕ್ಫೋರ್ಸ್ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ನಿಯಮ ಪಾಲನೆಗಳ ಬಗ್ಗೆ ಮಾಹಿತಿ ನೀಡಿದರು.
ಕೊರೊನಾ ೩ನೇ ಅಲೆಯು ಶೀಘ್ರಗತಿಯಲ್ಲಿ ಹರಡುತ್ತಿದೆ. ಆದರೆ, ಯಾವುದೇ ಜೀವಹಾನಿ ಸಂಭವಿಸುತ್ತಿಲ್ಲ. ಆದರೂ, ಜನ ಜಾಗೃತರಾಗಿ ರೋಗ ಹರಡದಂತೆ ಜಾಗೃತಿ ತೆಗೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು, ಲಸಿಕೆ ಪಡೆದು ಕೊಳ್ಳುವುದು ಉತ್ತಮ ಕ್ರಮ. ಈ ಬಗ್ಗೆ ಗ್ರಾಮ ಪಂಚಾಯಿತಿ ಟಾಸ್ಕ್ಫೋರ್ಸ್ ಸಮಿತಿ ಜನರ ಆರೋಗ್ಯದ ಉಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ಕೊರೊನಾ ಜಾಗೃತಿ ಸಭೆಯಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ವೃತ್ತ ನಿರೀಕ್ಷಕ ಜಯರಾಮ್, ಗ್ರಾಮ ಉಪಾಧ್ಯಕ್ಷೆ ಸವಿತಾ, ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ನೂರೇರ ರತಿ ಅಚ್ಚಪ್ಪ, ಕೊಣಿಯಂಡ ಬೋಜಮ್ಮ, ಪುಷ್ಪಾಮನೋಜ್, ವಿವೇಕ್ ರಾಯ್ಕರ್, ಹಕೀಮ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಹಾಜರಿದ್ದರು.