ಗೋಣಿಕೊಪ್ಪ, ಜ. ೨೧: ಜಿಎಸ್‌ಟಿ ನೋಂದಾಯಿತ ಬೆಳೆಗಾರರಿಗೆ ಮಾತ್ರ ಸಬ್ಸಿಡಿ ಆಧಾರದಲ್ಲಿ ರಸಗೊಬ್ಬರ ವಿತರಣೆ ಮಾಡಬೇಕೆಂಬ ಸರ್ಕಾರದ ಮಾರ್ಗಸೂಚಿಯಿಂದ ಕೊಡಗಿನ ಬಹುಪಾಲು ರೈತರು ಪ್ರಸ್ತುತ ಪರಿಸ್ಥಿತಿಯಲ್ಲಿ ಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ವಿಷಾಧಿಸಿದ್ದಾರೆ.

ಕೊಡಗಿನ ಹಲವಾರು ರೈತರ ಜಮೀನಿನ ಪಹಣಿ ಇಂದಿಗೂ ಪಟ್ಟೆದಾರರ ಹೆಸರಿನಲ್ಲಿ ಇದೆ, ಜಂಟಿಯಾಗಿ ತೋರಿಸುತ್ತಿದೆ.

ಕಂದಾಯ ನಿಗದಿ ಆಗದೆ ಬಾಕಿ ಉಳಿದಿದೆ. ಈ ತರಹ ಇರುವ ಪಹಣಿ ಯಾವುದು ಕೃಷಿ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿರುವುದಿಲ್ಲ. ಇದರಿಂದ ಪಹಣಿ ಮತ್ತು ಅಧಾರ್ ಕಾರ್ಡ್ ಹೊಂದಾಣಿಕೆ ಇರುವ ರೈತರು ಮಾತ್ರ ಗೊಬ್ಬರ ಖರೀದಿಸಲು ಹಾಗೂ ಸರಕಾರದ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ವ್ಯವಸ್ಥೆಯ ಉದ್ದೇಶ ಸರಿಯಾಗಿ ಪಾರದರ್ಶಕವಾದರೂ ಮೊದಲು ಸರಕಾರ ಕೊಡಗಿನ ರೈತರ ಪಹಣಿ ಸಮಸ್ಯೆ ಬಗೆಹರಿಸಿ ಮುಂದಿನ ಕ್ರಮ ಕೈಗೊಳ್ಳುವುದು ಒಳಿತು. ಒಬ್ಬರಿಗೆ ಒಂದು ತಿಂಗಳಿಗೆ ಇಂತಿಷ್ಟೇ ಗೊಬ್ಬರ ಅನ್ನೋದು ಸಹ ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಈ ಕ್ರಮ ಪಾಲಿಸುವುದು ಕಷ್ಟ. ಮಳೆಗಾಲದಲ್ಲಿ ರೈತರು ಗೊಬ್ಬರ ಸಾಗಿಸುವುದು ಕಷ್ಟಕರವಾಗುತ್ತದೆ. ಆದುದರಿಂದ ಮಾರ್ಗಸೂಚಿ ಅನುಷ್ಠಾನ ಮಾಡಬಾರದೆಂದು ಒತ್ತಾಯಿಸಿದ್ದಾರೆ.