ಕೂಡಿಗೆ, ಜ. 18: ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಂಚಾರಿ ಪೊಲೀಸ್ ಠಾಣೆ ಕುಶಾಲನಗರ ಸಹಯೋಗ ದೊಂದಿಗೆ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಕಾನೂನು ಅರಿವು ಸಂಚಾರ ನಿರ್ವಹಣೆ ರಸ್ತೆ ಸುರಕ್ಷತೆ ಸಪ್ತಾಹ ಮಹಿಳಾ ದೌರ್ಜನ್ಯ ತಡೆ ಮುಂತಾದವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಂಚಾರ ನಿರ್ವಹಣೆ ಬಗ್ಗೆ ಮಾತನಾಡಿದ ಸಂಚಾರಿ ಪೊಲೀಸ್ ಇನ್ಸ್‍ಪೆಕ್ಟರ್ ಸುಬ್ರಮಣ್ಯ ರಸ್ತೆ ಸುರಕ್ಷತೆಯ ನಿಯಮಗಳು ಚಾಲನೆಯ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ನಂತರ ಪೊಲೀಸ್ ಪೇದೆ ಆಶಾ ಮಾತನಾಡಿ ರಸ್ತೆ ಸುರಕ್ಷತೆಯ ನಿಯಮಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಪಘಾತಗಳು ಆಗದಂತೆ ಎಚ್ಚರಿಕೆ ಯಿಂದ ವಾಹನ ಚಲಾಯಿಸಬೇಕು ಎಂದರು.
ಸೌಮ್ಯ ಮಹಿಳಾ ಸುರಕ್ಷತೆಯ ಬಗ್ಗೆ ಮಹಿಳಾ ದೌರ್ಜನ್ಯ ತಡೆಯ ಬಗ್ಗೆ ಪೋಕ್ಸೋ ಕಾಯ್ದೆ ಬಗ್ಗೆ ವಿವರಿಸಿದರು. ಎನ್.ಎಸ್.ಎಸ್. ಘಟಕದ ಅಧಿಕಾರಿಗಳಾದ ಕಾವೇರಪ್ಪ, ಚರಿತ ಹಾಗೂ ವಿದ್ಯಾರ್ಥಿ ಸಂಚಾಲಕ ಡಾ. ಹರ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.