ಮುಳ್ಳೂರು, ಜ. 18: ಸಮೀಪದ ಗೋಪಾಲಪುರ ಗ್ರಾಮ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಸೋಮವಾರ ಬನದ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರತಿವರ್ಷ ಬನದ ಹುಣ್ಣಿಮೆ ಪ್ರಯುಕ್ತ ದೇವಸ್ಥಾನದಲ್ಲಿ ಅದ್ಧೂರಿ ಪೂಜಾ ಮಹೋತ್ಸವವನ್ನು ನಡೆಸಲಾಗುತ್ತಿತ್ತು.
ಆದರೆ, ಈ ವರ್ಷ ಕೋವಿಡ್-19 ಹಿನ್ನೆಲೆಯ ಮಾರ್ಗಸೂಚಿಯಂತೆ ದೇವಾಲಯ ಸಮಿತಿ ಸರಳವಾಗಿ ಸಂಪ್ರದಾಯ ಪ್ರಕಾರವಾಗಿ ಆಚರಿಸಲು ತೀರ್ಮಾನಿಸಿದ್ದು, ಅದರಂತೆ ದೇವಸ್ಥಾನದಲ್ಲಿ ಶ್ರೀ ದೇವಿಗೆ ಪೂಜಾ ವಿಧಿ ವಿಧಾನ ಕೈಂಕರ್ಯ ನೆರವೇರಿಸಲಾಯಿತು.
ಬೆಳಿಗ್ಗೆ ಅರ್ಚಕರು ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ದೇವಿಯ ವಿಗ್ರಹವನ್ನು ಹೂವಿನಿಂದ ಅಲಂಕರಿಸಿ ಪೂಜಿಸಿದ ಬಳಿಕ ದೇವರುಗಳಿಗೆ ಸಾಂಪ್ರದಾಯಿಕವಾಗಿ ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಸ್ಥಳೀಯ ಭಕ್ತಾದಿಗಳು ಮಾತ್ರ ಪಾಲ್ಗೊಂಡಿದ್ದರು.