ಕುಶಾಲನಗರ, ಜ. 18: ಕುಶಾಲನಗರ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಮುಕ್ತ ಕೇರಂ ಪಂದ್ಯಾವಳಿಯಲ್ಲಿ ಮೈಸೂರು ಜಿಲ್ಲೆಯ ಬೈಲುಕುಪ್ಪೆ ರವಿಕುಮಾರ್ ಮತ್ತು ಮಂಜುನಾಥ್ ಜೋಡಿ ಪ್ರಥಮ ಸ್ಥಾನಗಳಿಸಿ ಟ್ರೋಫಿ ಗಳಿಸಿದ್ದಾರೆ.

ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ಜಿಲ್ಲೆಯ ರವಿಕುಮಾರ್ ಮತ್ತು ಮಂಜುನಾಥ್ ತಂಡ ಹಾಗೂ ಕೊಡಗು ಜಿಲ್ಲೆಯ ಕುಶಾಲನಗರದ ಮಹಾದೇವ ಮತ್ತು ನವಾಜ್ ತಂಡಗಳ ನಡುವೆ ನಡೆದ ತೀವ್ರ ಹಣಾಹಣಿಯ ಪಂದ್ಯದಲ್ಲಿ ರವಿಕುಮಾರ್ ಮತ್ತು ಮಂಜುನಾಥ್ ತಂಡ ಪ್ರಥಮ ಸ್ಥಾನಗಳಿಸಿದರು. ಮಹಾದೇವ ಮತ್ತು ನವಾಜ್ ತಂಡ ದ್ವಿತೀಯ ಸ್ಥಾನ ಗಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ. ಜೈವರ್ಧನ್ ಪಂದ್ಯಾವಳಿಗೆ ಚಾಲನೆ ನೀಡಿದರು. ವಿಜೇತ ತಂಡಗಳಿಗೆ ಪ.ಪಂ. ಸದಸ್ಯ ವಿ.ಎಸ್. ಆನಂದ್ ಕುಮಾರ್ ಬಹುಮಾನ ವಿತರಣೆ ಮಾಡಿದರು. ಪ್ರಥಮ ಸ್ಥಾನಗಳಿಸಿದ ತಂಡಕ್ಕೆ ರೂ. 15 ಸಾವಿರ ನಗದು ಹಾಗೂ ಟ್ರೋಫಿ ಹಾಗೂ ದ್ವಿತೀಯ ಸ್ಥಾನಗಳಿಸಿದ ತಂಡಕ್ಕೆ ರೂ. 10 ಸಾವಿರ ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು.

ಈ ಸಂದರ್ಭ ಇಂಟೆಕ್ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹದೇವ್, ಪ್ರಗತಿಪರ ವೇದಿಕೆ ಅಧ್ಯಕ್ಷ ಜಯಪ್ರಕಾಶ್,ಮುಖಂಡರಾದ ಸೂರಿ, ಆಕ್ಟರ್, ನವಾಜ್, ಮಂಜು ಉಪಸ್ಥಿತರಿದ್ದರು. ಪಂದ್ಯಾವಳಿಗೆ ವಿವಿಧೆಡೆಗಳಿಂದ 20 ತಂಡಗಳು ಭಾಗವಹಿಸಿದ್ದವು.